ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಭಜರಂಗಿ' ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದ್ದ ಸೌರವ್ ಲೋಕೇಶ್, ಆ ಬಳಿಕ "ಭಜರಂಗಿ' ಲೋಕಿ ಎಂದೇ ಜನಪ್ರಿಯತೆ ಗಳಿಸಿದವರು. ಇದುವರೆಗೆ ಕೆಲ ತೆಲುಗು ಚಿತ್ರಗಳು ಸೇರಿ 35ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಬಹುತೇಕ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು "ದಿಲ್ದಾರ್' ಚಿತ್ರದ ಕ್ಯಾರಕ್ಟರ್ ಟೀಸರ್ ಬಿಡುಗಡೆಯಾಗಲಿದ್ದು, ಇದೇ ಖುಷಿಯಲ್ಲಿ ಲೋಕಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.
""ದಿಲ್ದಾರ್' ಕಾಲೇಜ್ ಕ್ಯಾಂಪಸ್ನಲ್ಲಿ ನಡೆಯುವ ಕಥೆ. "ಮಿ. ಆ್ಯಂಡ್ ಮಿಸಸ್ ರಾಮಾಚಾರಿ', "ಜಾಗ್ವಾರ್' ಚಿತ್ರಗಳ ಬಳಿಕ ಮತ್ತೆ ಕಾಲೇಜ್ ಕಥೆಯಲ್ಲಿ ನಟಿಸಿದ್ದೇನೆ. ಹೊಸ ತಂಡದ ಜತೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು. ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು, ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಬಿಡುಗಡೆ ಮಾಡಿರುವುದು ಖುಷಿ ನೀಡಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ. ಅಂದಹಾಗೆ ಮಧು ಜಿ. ಗೌಡ ಆ್ಯಕ್ಷನ್&ಕಟ್ ಹೇಳುತ್ತಿರುವ "ದಿಲ್ದಾರ್' ಚಿತ್ರದಲ್ಲಿ ಶ್ರೇಯಸ್ ಕೆ. ಮಂಜು, ರವಿಚಂದ್ರನ್ ಜತೆ ಲೋಕಿ ತೆರೆಹಂಚಿಕೊಳ್ಳಲಿದ್ದಾರೆ.
"ಆಚಾರ್ಯ', "ಸಲಾರ್'ನಂತಹ ಟಾಲಿವುಡ್ ಚಿತ್ರಗಳಲ್ಲೂ ಮಿಂಚಿರುವ ಲೋಕಿ, ಸದ್ಯ ಚಿರಂಜೀವಿ ಅವರ "ವಿಶ್ವಂಭರ'ದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. "ಸದ್ಯ ಚಿತ್ರದ ಪೋಸ್ಟ್&ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದೀಗ ಮುಂಬೈನಲ್ಲಿ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ತೆಲುಗಿನ "ಘೋಡಾ' ರಿಲೀಸ್ಗೆ ರೆಡಿ ಇದೆ. "ವಿಶ್ವಂಭರ' ತುಂಬ ದಿನಗಳ ನಂತರ ಕ್ರಿಯೇಟಿವ್ ವಿಷಯದಲ್ಲಿ ಖುಷಿ ಕೊಟ್ಟ ಸಿನಿಮಾ. ಚಿತ್ರದಲ್ಲಿ ಇಬ್ಬರು ವಿಲನ್ಗಳಿದ್ದು, ನಾನು ಮತ್ತು ಕುಣಾಲ್ ಕಪೂರ್ ನಟಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಇನ್ನು ಪರಭಾಷೆಗಳಲ್ಲಿ ಕೆಲಸ ಮಾಡುವ ಬಗ್ಗೆ, "ಈಗ ಕಲಾವಿದರಿಗೆ, ಕಲೆಗೆ ಭಾಷೆಯ ಗಡಿಯಿಲ್ಲ. ಯಾವುದೇ ಭಾಷೆಯಲ್ಲಿ ನಟಿಸಿದರೂ ನಮಗದು ಕಲಿಕೆಯೇ. ನಟನೆ, ಶ್ರಮ ಮತ್ತು ಸಿದ್ಧತೆ ಅಂತ ಬಂದಾಗ ಎರಡೂ ಒಂದೇ. ಭಾಷೆ ಅಂತ ಬಂದಾಗ ಮಾತೃಭಾಷೆ ನನಗೆ ಈಜಿ. ಆದರೆ, ಬೇರೆ ಭಾಷೆಗಳನ್ನು ಕಲಿತು ಮಾಡಬೇಕು. "ವಿಶ್ವಂಭರ' ಚಿತ್ರಕ್ಕೆ ಆರು ದಿನಗಳ ಕಾಲ ಡಬ್ಬಿಂಗ್ ನಾನೇ ಮಾಡಿದ್ದೇನೆ' ಎನ್ನುತ್ತಾರೆ.
"ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸುವಾಸೆ. ನಾನು ಮಾಡದ ಯಾವುದೇ ಪಾತ್ರ ಬಂದರೂ ನನಗೆ ಇಷ್ಟ' ಎನ್ನುವ ಲೋಕಿಗೆ ಪೌರಾಣಿಕ ಪಾತ್ರಗಳಲ್ಲಿ ನಟಿಸುವಾಸೆ ಇದೆಯಂತೆ. "ಅಂತಹ ಪಾತ್ರಕ್ಕೆ ಕತ್ತಿವರಸೆ, ಉಡುಗೆ&ತೊಡುಗೆ.. ಹೀಗೆ ಸಿದ್ಧತೆಯ ಪ್ರಕ್ರಿಯೆಯೇ ಖುಷಿ ನೀಡುತ್ತದೆ. ಸವಾಲು ಎಷ್ಟು ದೊಡ್ಡದಿರುತ್ತೋ, ಅಷ್ಟೇ ಹೆಚ್ಚು ನನಗಿಷ್ಟವಾಗುತ್ತೆ' ಎನ್ನುತ್ತಾರೆ ಅವರು.
ಕಳೆದ 20 ವರ್ಷಗಳಿಂದ ವರ್ಕೌಟ್ ಮಾಡುತ್ತಿರುವ ಲೋಕಿ, ಮೊದಲಿನಿಂದಲೂ ಶಿಸ್ತುಬದ್ಧ ಜೀವನ ರೂಢಿಸಿಕೊಂಡಿದ್ದಾರಂತೆ. "ಇಷ್ಟೇ ತಿನ್ನಬೇಕು, ಇಷ್ಟೇ ವರ್ಕೌಟ್ ಮಾಡಬೇಕು. ಶಿಸ್ತನ್ನು ಯಾವತ್ತೂ ಬಿಡಬಾರದು. ಯಾವುದೋ ಪಾತ್ರಕ್ಕೆ ತೂಕ ಹೆಚ್ಚಿಸಿಕೊಳ್ಳಬೇಕು ಅಥವಾ ಕಡಿಮೆ ಮಾಡಿಕೊಳ್ಳಬೇಕು ಅಂದಾಗ ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡದೇ ಎರಡಕ್ಕೂ ತಯಾರಿರಬೇಕು. ಹೀಗಾಗಿ ನಾನು ಯಾವಾಗಲೂ ಸಿದ್ಧತೆಯಲ್ಲಿರುತ್ತೇನೆ. ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಫಿಟ್ನೆಸ್ ಮುಖ್ಯ' ಎಂದು ಹೇಳಿಕೊಳ್ಳುತ್ತಾರೆ.