ಸಿನಿವಾಣಿ

ಸೆ.10ಕ್ಕೆ ಭಜರಂಗಿ-2; ಗಣಪತಿ ಹಬ್ಬಕ್ಕೆ ರಾಜ್ಯಾದ್ಯಂತ ಬಿಡುಗಡೆ..

ಬೆಂಗಳೂರು: ಸರ್ಕಾರ ಶೇ. 50ರಷ್ಟು ಹಾಜರಾತಿಗೆ ಚಿತ್ರಪ್ರದರ್ಶನ ಮಾಡುವುದಕ್ಕೆ ಅನುಮತಿ ಕೊಟ್ಟಿದ್ದರೂ, ಇದುವರೆಗೂ ಯಾರೂ ಸಹ ಹೊಸ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ. ಕರೊನಾ ಮೂರನೆಯ ಅಲೆಯ ಭಯವಿರುವುದರಿಂದ ಮತ್ತು ಈ ಸಂದರ್ಭದಲ್ಲಿ ಜನ ಚಿತ್ರಮಂದಿರಗಳತ್ತ ಬರುತ್ತಾರೋ ಇಲ್ಲವೋ ಎಂಬ ಭಯದಿಂದ, ಬಿಗ್ ಬಜೆಟ್ ಚಿತ್ರಗಳಿರಲಿ, ಕಡಿಮೆ ಬಜೆಟ್ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೂ ನಿರ್ವಪಕರು ಹಿಂದೇಟು ಹಾಕುತ್ತಿದ್ದಾರೆ.

ಹೀಗಿರುವಾಗ ‘ಭಜರಂಗಿ 2’ ಚಿತ್ರವನ್ನು ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡುವುದಾಗಿ ನಿರ್ವಪಕ ಜಯಣ್ಣ ಘೋಷಿಸಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಹಬ್ಬದ ಸೀಸನ್​ನಲ್ಲಿ ಬಿಡುಗಡೆಯಾಗಲಿರುವ ಮೊದಲ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆಗೆ ‘ಭಜರಂಗಿ 2’ ಪಾತ್ರವಾಗಲಿದೆ. ಚಿತ್ರ ಬಿಡುಗಡೆಗೆ ಇನ್ನೂ ಒಂದೂವರೆ ತಿಂಗಳು ಬಾಕಿ ಇರುವುದರಿಂದ ಅಷ್ಟರಲ್ಲಿ, ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಹಾಜರಾತಿಗೆ ಅನುಮತಿ ಕೊಡುವ ನಿರೀಕ್ಷೆ ಇದೆ. ‘ಭಜರಂಗಿ 2’ ಚಿತ್ರದಲ್ಲಿ ಶಿವರಾಜಕುಮಾರ್, ಭಾವನಾ ಮೆನನ್, ಶ್ರುತಿ, ‘ಭಜರಂಗಿ’ ಲೋಕಿ ಮುಂತಾದವರು ನಟಿಸಿದ್ದು, ಎ. ಹರ್ಷ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಬಹುತೇಕ ಮುಗಿದಿದೆ.