ಸಿನಿವಾಣಿ

ಭಜರಂಗಿ 2 ಬಿಡುಗಡೆ ಮುಂದೂಡಿಕೆ; ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಎಂದ ಶಿವಣ್ಣ

Webdesk - Ravikanth

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರದ ಬಿಡುಗಡೆ ಸೆಪ್ಟೆಂಬರ್ 10ರಂದು ಗಣೇಶ ಹಬ್ಬದ ಪ್ರಯುಕ್ತ ಆಗಬೇಕಿತ್ತು. ಆದರೆ, ಇದೀಗ ಚಿತ್ರಬಿಡುಗಡೆ ಮುಂದಕ್ಕೆ ಹೋಗಿದೆ. ಅಷ್ಟೇ ಅಲ್ಲ, ನಾಳೆ (ಸೆಪ್ಟೆಂಬರ್ 1) ಬಿಡುಗಡೆಯಾಗಬೇಕಿದ್ದ ಟ್ರೇಲರ್ ಸಹ ಮುಂದೂಡಲ್ಪಟ್ಟಿದೆ. ಈ ವಿಷಯವನ್ನು ಸ್ವತಃ ಶಿವರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಅವರು, ‘ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್​ಡೌನ್ ಸಹ ಜಾರಿಯಲ್ಲಿದೆ. ಹಾಗಾಗಿ, ಅಂದುಕೊಂಡ ದಿನದಂದು ಚಿತ್ರದ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಚಿತ್ರದ ಬಿಡುಗಡೆಯನ್ನು ಸ್ವಲ್ಪ ಮುಂದಕ್ಕೆ ಹಾಕಿದ್ದೇವೆ. ಹಾಗಂತ ತುಂಬಾ ತಡವಾಗುವುದಿಲ್ಲ. ಆದಷ್ಟು ಬೇಗ ಟ್ರೇಲರ್ ಬಿಡುಗಡೆ ಮಾಡಿ, ಅದರಲ್ಲೇ ಹೊಸ ದಿನಾಂಕವನ್ನು ಘೋಷಿಸುತ್ತೇವೆ’ ಎಂದು ಹೇಳಿದ್ದಾರೆ.

ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿರುವ ಬಗ್ಗೆ ಯಾರೂ ಬೇಸರ ಮಾಡಿಕೊಳ್ಳಬಾರದು ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿರುವ ಅವರು, ‘ಈಗಾಗಲೇ ಚಿತ್ರ ಸಾಕಷ್ಟು ಅಡೆತಡೆಗಳ ಮಧ್ಯೆ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರತಂಡ ಪಟ್ಟ ಶ್ರಮವನ್ನು ಪ್ರೇಕ್ಷಕರು ಪಡಬಾರದು. ಯಾವುದೇ ಅಡೆ-ತಡೆಗಳಿಲ್ಲದೆ ಅರಾಮವಾಗಿ ಚಿತ್ರ ನೋಡಿ, ಗೆಲ್ಲಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.