Anik Dutta (ಚಿತ್ರ X) 
ಸಿನಿವಾಣಿ

ಟೆರೇಸ್‌ನಿಂದ ಬಿದ್ದು ದುರಂತ ಅಂತ್ಯ ಕಂಡ ಬಂಗಾಳಿ ಚಲನಚಿತ್ರ ನಿರ್ದೇಶಕ ಅನಿಕ್ ದತ್ತ! Anik Dutta

ಕೋಲ್ಕತ್ತಾ: ಬಂಗಾಳಿ ಚಿತ್ರರಂಗದ ಖ್ಯಾತ ನಿರ್ದೇಶಕ ಅನಿಕ್ ದತ್ತ (66) ಇಂದು (ಮೇ 27) ಮಧ್ಯಾಹ್ನ ಕೋಲ್ಕತ್ತಾದ ಗರಿಯಾಹತ್ ಸಮೀಪದ ತಮ್ಮ ಪತ್ನಿಯ ನಿವಾಸದ ಟೆರಸ್‌ನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಘಟನೆ ಸಂಭವಿಸಿದ ತಕ್ಷಣವೇ ತೀವ್ರವಾಗಿ ಗಾಯಗೊಂಡಿದ್ದ ದತ್ತ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅನಿಕ್ ದತ್ತ ಯಾರು?

ದತ್ತ ಅವರು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಸಂಸ್ಥಾಪಕ ನರೇಂದ್ರ ಚಂದ್ರ ದತ್ತ ಅವರ ಮೊಮ್ಮಗ. 2012 ರಲ್ಲಿ ರಾಜಕೀಯ ವಿಡಂಬನೆ ಭೂತರ್ ಭಾಬಿಷ್ಯತ್ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಇತಿಹಾಸದಲ್ಲೇ ಅತ್ಯಂತ ದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಹಳೆಯ ಕೋಲ್ಕತ್ತಾದ ಐತಿಹಾಸಿಕ ಕಟ್ಟಡಗಳನ್ನು ಕೆಡವಿ ಮಾಲ್‌ಗಳನ್ನು ಕಟ್ಟುವ ಪ್ರವೃತ್ತಿಯ ವಿರುದ್ಧ ಭೂತಗಳು ಒಟ್ಟಾಗಿ ಹೋರಾಡುವ ಈ ವಿಡಂಬನಾತ್ಮಕ ಕಾಮಿಡಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದು, ಈ ಚಿತ್ರವನ್ನು ನಂತರ ಬಾಲಿವುಡ್‌ನಲ್ಲಿ 'ಗ್ಯಾಂಗ್ ಆಫ್ ಘೋಸ್ಟ್ಸ್' ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.
ಇದಾದ ಬಳಿಕ ಅವರು ಆಶ್ಚರ್ಯ ಪ್ರದೀಪ್, ಮೇಘನಾದ್ ಬಧ್ ರಹಸ್ಯ, ಭವಿಷ್ಯತೇರ್ ಭೂತ್ ಮತ್ತು ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಜೀವನ ಆಧಾರಿತ 'ಅಪರಾಜಿತೋ' ಎಂಬ ಅತ್ಯಂತ ಪ್ರಶಂಸನೀಯ ಸಿನಿಮಾವನ್ನು ನಿರ್ದೇಶಿಸಿದ್ದರು. ಸತ್ಯಜಿತ್ ರೇ ಅವರು ತಮ್ಮ ಮೊದಲ ಸಿನಿಮಾ 'ಪಥೇರ್ ಪಾಂಚಾಲಿ' ಮಾಡುವಾಗ ಎದುರಿಸಿದ ಕಷ್ಟಗಳನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿತ್ತು.
ಸತ್ಯಜಿತ್ ರೇ ಅವರ ಕಟ್ಟಾ ಅಭಿಮಾನಿಯಾಗಿದ್ದ ದತ್ತ ಅವರ ಹೆಚ್ಚಿನ ಚಲನಚಿತ್ರಗಳು ರೇ ಅವರ ಪರಂಪರೆಗೆ ಗೌರವ ಸಲ್ಲಿಸುವಂತಿದ್ದವು, ಅವರ ಚಲನಚಿತ್ರ ನಿರ್ಮಾಣ ಶಾಲೆಯ ಮುದ್ರೆಯನ್ನು ಹೊಂದಿದ್ದವು (ಏಜೆನ್ಸೀಸ್​).