ಸಿನಿವಾಣಿ

ಬೆಳಕಿನ ಹಬ್ಬದಂದು ರಾಘಣ್ಣ ಅಭಿನಯದ 'ಬೆಳಕು' ತೆರೆಗೆ

ಬೆಂಗಳೂರು: ಈ ಬಾರಿ ದೀಪಾವಳಿಗೆ ರಜನಿಕಾಂತ್​​ ಅಭಿನಯದ 'ಅಣ್ಣಾತ್ತೆ' ಚಿತ್ರವು ಬಿಡುಗಡೆಯಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಬಾಲಿವುಡ್​ನಿಂd ಅಕ್ಷಯ್​ ಕುಮಾರ್​ ಮತ್ತು ಕತ್ರೀನಾ ಕೈಫ್​ ಅಭಿನಯದ 'ಸೂರ್ಯವಂಶಿ' ಚಿತ್ರವು ಬಿಡುಗಡೆಯಾಗುತ್ತಿದೆ. ಕನ್ನಡದ ಪರವಾಗಿ ಯಾವ ಚಿತ್ರ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು.

ಈಗ ಈ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಘವೇಂದ್ರ ರಾಜಕುಮಾರ್ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬೆಳಕು' ಚಿತ್ರ ನವೆಂಬರ್ 5 ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಕಥೆಯು ಬೆಳಕು ಮತ್ತು ನೇತ್ರದಾನದ ಕುರಿತಾದ್ದರಿಂದ, ಅದೇ ದಿನ ಬಿಡುಗಡೆಯಾದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಚಿತ್ರತಂಡದವರು ಅಂದು ಚಿತ್ರವನ್ನು ತರೆಗೆ ತರುವುದಕ್ಕೆ ಮುಂದಾಗಿದ್ದಾರೆ.

ಹಿರಿಯ ನಿರ್ಮಾಪಕ ಬಿ.ಎನ್ ಗಂಗಾಧರ್ ಅರ್ಪಿಸುತ್ತಿರುವ ಈ ಚಿತ್ರವನ್ನು ಅಂಕಿತ ಫಿಲಂಸ್ ಲಾಂಛನದಲ್ಲಿ ಬಿ.ಜಿ.ಶ್ರೇಯಸ್ಸ್ ನಿರ್ಮಿಸಿದ್ದಾರೆ.‌ ಬಿ.ಮಂಜುನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ, ಪ್ರಸಾದ್ ಬಾಬು ಛಾಯಾಗ್ರಹಣ ಈ ಚಿತ್ರಕ್ಕಿದೆ.

ರಾಘವೇಂದ್ರ ರಾಜಕುಮಾರ್​​ಗೆ ಜೋಡಿಯಾಗಿ ಸುಧಾರಾಣಿ ನಟಿಸಿದ್ದು, ಮಿಕ್ಕಂತೆ ನಿರಿಕ್ಷಾ ಶೆಟ್ಟಿ, ಸಚಿನ್, ಅಶ್ವಿನಿ, ಮಧುಸೂದನ್ ಟಿ, ಮಂಜುನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.