ಬೆಂಗಳೂರು: ಕರೊನಾ ಲಾಕ್ಡೌನ್ ನಡುವೆಯೇ ಸಿನಿಮಾ ಸಂಬಂಧಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸರ್ಕಾರ ಅನುಮತಿ ನೀಡಿದೆ. ಆ ಆದೇಶದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳು ಸ್ಥಗಿತಗೊಂಡಿದ್ದ ಕೆಲಸಗಳನ್ನು ಕೈಗೆತ್ತಿಕೊಂಡಿವೆ. ಅದೇ ರೀತಿ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಶೀರ್ಷಿಕೆಯ ಸಿನಿಮಾ ಇತ್ತೀಚೆಗೆ ಹಾಡುಗಳ ಧ್ವನಿ ಮುದ್ರಣ ಕಾರ್ಯ ಮುಗಿಸಿಕೊಂಡಿದೆ.
ಶೂಟಿಂಗ್ಗೆ ಅನುಮತಿ ಸಿಗುತ್ತಿದ್ದಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ವಪಕ ಮತ್ತು ಕಮಲಾಕರ ಚಿತ್ರಾಲಯ ಸಂಸ್ಥೆಯ ಶಿವಾನಂದಪ್ಪ ಬಳ್ಳಾರಿ ನಿರ್ಧರಿಸಿ ದ್ದಾರೆ. ಈ ಹಿಂದೆ ‘ನಾವೇ ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಹರಿಕೃಷ್ಣ, ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಸಿನಿಮಾ ನಿರ್ದೇಶನ ಮಾಡಲಿದ್ದು, ‘ಸುಮ್ ಸುಮ್ನೆ’ ವಿಜಯಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಎ.ಟಿ. ರವೀಶ್ ಸಂಗೀತ, ಆಂಟೋನಿ ಎಂ. ಸಾಹಿತ್ಯ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ಪವನ್ಗೌಡ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ವಿನೋದ್ ಪಾಟೀಲ್, ನಿಖಿತ ಸ್ವಾಮಿ, ಎಸ್. ನಾರಾಯಣಸ್ವಾಮಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಶ್ರೀ, ವಿಲಾಸ್ಗೌಡ ಪಾತ್ರವರ್ಗದಲ್ಲಿದ್ದಾರೆ. ಹಾರರ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ನೊಣವಿನಕೆರೆ ಸುತ್ತಮುತ್ತ ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.