ಚಿತ್ರ: ಬಂದೂಕ್
ನಿರ್ದೇಶನ: ಮಹೇಶ್ ರವಿಕುಮಾರ್
ತಾರಾಗಣ: ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಪಾರ್ಥ, ಶ್ವೇತಾ ಪ್ರಸಾದ್, ಮಾನಸ ಮತ್ತಿತರರು.
ಶಿವ ಸ್ಥಾವರಮಠ
ಬಂದೂಕಿನ ನಳಿಕೆಯಿಂದ ಸಿಡಿಯುವ ಗುಂಡು, ಹುಡುಗಿಗೆ ಪ್ರೇಮ ನಿವೇದನೆ ಮಾಡಲು ಆಕೆಯ ಹಿಂದೆಯೇ ಸುತ್ತುತ್ತಿರುವ ಹುಡುಗ, ಇನ್ನೊಂದೆಡೆ ನದಿಯಲ್ಲಿ ಹೆಣ ಹುಡುಕುವಾತ.. ಇದೇ ದೃಶ್ಯಗಳ ಸುತ್ತ ಕಥೆ ಗಿರಕಿ ಹೊಡೆಯುವಾಗ ಪ್ರೇಕ್ಷಕನಿಗೆ ಕಥೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ, ತಾಳ್ಮೆಯಿಂದ ಕುಳಿತರೆ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತ ಸಮಾಧಾನ ಸಿಗಲಿದೆ. ಇದು ಮಹೇಶ್ ರವಿಕುಮಾರ್ ನಿರ್ದೇಶನದ ‘ಬಂದೂಕ್’ ಹೈಲೈಟ್. ಕ್ರೈಂ ಡ್ರಾಮಾದ ರೋಮಾಂಚನಕಾರಿ ಪಯಣದಲ್ಲಿ ಕೇವಲ ರಕ್ತವಷ್ಟೇ ಅಲ್ಲ. ಸ್ನೇಹ, ಪ್ರೀತಿ ಹಾಗೂ ರಾಜಕೀಯ ದಂಗಲ್ ಇದ್ದು, ಇವು ಸಿನಿಮಾದ ಕಥೆಯನ್ನು ವಿಸ್ತರಿಸಿವೆ. ಅವರು ಕಲಿಯುಗಪುರದ ಅದ್ವೆತ- ಭೈರವ (ಗೋಪಾಲಕೃಷ್ಣ ದೇಶಪಾಂಡೆ) ಎಂಬ ಅವಳಿಗಳು. ಅನಾಥಾಶ್ರಮದ ಮೂಲಕ ಬಡವರಿಗೆ ಅದ್ವೆತ ನೆರವಾದರೆ, ಭೈರವ ಮಾತ್ರ ರಕ್ತಹೀರುವ ಕ್ರಿಮಿನಲ್. ರಾಜಕೀಯದಲ್ಲಿ ಬೆಳೆಯಬೇಕು ಎಂದು ಅದ್ವೆತನನ್ನು ಮಗಿಸಿ, ಆತನ ಮುಖವಾಡ ಹೊತ್ತು ಅನಾಥಾಶ್ರಮ ಸೇರುತ್ತಾನೆ. ಅಲ್ಲಿರುವ ಅಪ್ರಾಪ್ತ ಹುಡುಗರ ಕೈಗೆ ಬಂದೂಕನ್ನಿಟ್ಟು ತನಗೆ ಅಡ್ಡಬಂದವರನ್ನು ಮುಗಿಸಲು ಸುಪಾರಿ ಕೊಡುತ್ತಾನೆ. ಆಗ ಆತನ ಕುತಂತ್ರಕ್ಕೆ ಬಲಿಯಾಗುವ ನಾಯಕ ವಿಶ್ವಾಮಿತ್ರ (ಪಾರ್ಥ) ಜೈಲು ಸೇರಿ, ಅಲ್ಲಿಂದ ಹೊರಬಂದು ಕೊನೆಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದೇ ‘ಬಂದೂಕ್’ ಕಥೆ.
ಮಹೇಶ್ ರವಿಕುಮಾರ್ ಕ್ಲಿಷ್ಟ ಎನಿಸಿದರೂ ಕುತೂಹಲಕಾರಿ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಸುತ್ತಿ ಬಳಸಿ ಕಥೆ ನಿರೂಪಿಸುವಾಗ ಹಾದಿ ತಪ್ಪಿತೇನೂ ಎನಿಸುತ್ತದೆ. ಆದರೆ, ದ್ವಿತೀಯಾರ್ಧ ಆರಂಭವಾದಾಗ ಆ ಗೊಂದಲವನ್ನು ನಿರ್ದೇಶಕರು ಬಗೆಹರಿಸಿದ್ದಾರೆ. ಈ ಸಮಯದಲ್ಲಿ ತಾಳ್ಮೆ ಪರೀಕ್ಷೆ ಸಹಜ. ಕಥೆಯಲ್ಲಿ ಹಲವಾರು ಪಾತ್ರಗಳಿದ್ದು, ಎಲ್ಲರಿಂದಲೂ ಕೆಲಸ ತೆಗಿಸಿಕೊಂಡಿದ್ದಾರೆ. ಕ್ರೈಂ ಡ್ರಾಮಾದಲ್ಲಿ ರೋಮಾಂಚಕ ಅನುಭವ ನೀಡುವುದು ಮಹೇಶ್ ಬರವಣಿಗೆಯ ಶಕ್ತಿ. ಗೋಪಾಲಕೃಷ್ಣ ದೇಶಪಾಂಡೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಇಡೀ ಕಥೆಗೆ ಅವರೇ ಹೀರೋ-ವಿಲನ್. ಬಾಲಾಜಿ ಮನೋಹರ್ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಹೊಸ ಕಲಾವಿದರು ಕಥೆಗೆ ಪೂರಕವಾಗಿ ಅಭಿನಯಿಸಿದ್ದು, ಪಾರ್ಥ ಗಮನಸೆಳೆಯುತ್ತಾರೆ. ಮಹೇಶ್ ಸಂಭಾಷಣೆ ಬಂದೂಕಿನಂತೆಯೇ ಸದ್ದು ಮಾಡುತ್ತದೆ. ಪ್ರಸನ್ನ ಕುಮಾರ್ ಸಂಗೀತ, ಬಿಟ್ ಸಾಂಗ್ ಇಷ್ಟವಾಗುತ್ತದೆ.
ರೇಟಿಂಗ್: 3