ಸಿನಿವಾಣಿ

ಮಹೇಶ್ ಬಾಬು ಚಿತ್ರದಲ್ಲಿ ನಟಿಸಬಾರದಿತ್ತು ... ಪಶ್ಚಾತ್ತಾಪ ಪಟ್ಟ ನಟ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಸಾಕು ಎಂದು ಅದೆಷ್ಟೋ ಜನ ಕಾಯುತ್ತಾರೆ. ಹಾಗಿರುವಾಗ, ಮಹೇಶ್ ಬಾಬು ಚಿತ್ರದಲ್ಲಿ ನಟಿಸಿ, ಈಗ ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ಪಶ್ಚಾತ್ತಾಪ ಪಡುವವರನ್ನು ಎಲ್ಲಾದರೂ ಕಂಡಿದ್ದೀರಾ? ಹಾಗೆ ಪಶ್ಚಾತ್ತಾಪ ಪಟ್ಟಿರುವ ನಟನೇ ಬಾಂಡ್ಲಾ ಗಣೇಶ್.

ಬಾಂಡ್ಲಾ ಗಣೇಶ್, ತೆಲುಗು ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಅವರು, ನಂತರ ಬ್ರೇಕ್ ತೆಗೆದುಕೊಂಡು ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿದ ಅವರು, ಬಹಳ ದಿನಗಳ ನಂತರ ಮಹೇಶ್ ಬಾಬು ಅಭಿನಯದ `ಸರಿಲೇರು ನೀಕ್ಕೆವ್ವರು' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

ಈಗ ಆ ಚಿತ್ರದಲ್ಲಿ ನಟಿಸಬಾರದಾಗಿತ್ತು ಎಂದು ಗಣೇಶ್ ತಮ್ಮ ಆಪ್ತರ ಜತೆಗೆ ಹೇಳಿಕೊಂಡಿದ್ದಾರಂತೆ. ಆ ಚಿತ್ರದಲ್ಲಿ ನಟಿಸಿ, ತಪ್ಪು ಮಾಡಿದೆ ಎಂದು ಕೆಲವರ ಹತ್ತಿರ ಪಶ್ಚಾತ್ತಾಪ ಪಟ್ಟಿದ್ದಾರಂತೆ. ಇಷ್ಟಕ್ಕೂ ಗಣೇಶ್ ಬೇಸರಕ್ಕೆ ಕಾರಣವೇನು ಎಂಬ ಪ್ರಶ್ನೆ ಬರಬಹುದು? ಈ ಚಿತ್ರದಲ್ಲಿ ಗಣೇಶ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರ ತಮಗೆ ದೊಡ್ಡ ಬ್ರೇಕ್ ಕೊಡಬಹುದು ಎಂದು ಅವರು ಭಾವಿಸಿದ್ದರು. ಆದರೆ, ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಡುವುದಕ್ಕಿಂತ, ನೆಗೆಟಿವ್ ವಿಮರ್ಶೆಗಳೇ ಹೆಚ್ಚಾಗಿ ಕೇಳಿ ಬಂದಿದ್ದು, ಹಾಗಾಗಿ ಗಣೇಶ್ ಆ ಚಿತ್ರದಲ್ಲಿ ನಟಿಸಬಾರದಿತ್ತು ಎಂದು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ, ಗಣೇಶ್ ಇತ್ತೀಚಿನ ದಿನಗಳಲ್ಲಿ ನಿರ್ಮಾಣದಲ್ಲಿ ಒಂದಿಷ್ಟು ನಷ್ಟ ಅನುಭವಿಸುವುದರ ಜತೆಗೆ, ಕರೊನಾಗೂ ತುತ್ತಾಗಿದ್ದರಂತೆ. ಕೆಲವು ದಿನಗಳ ಹಿಂದೆ ಅವರ ಟೆಸ್ಟ್ ಮಾಡಿಸಿದಾಗ, ಅವರಿಗೆ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ.

ಒಂದು ಕಡೆ ಚಿತ್ರದಲ್ಲಿ ನಟಿಸಿದ್ದಿಕ್ಕೆ ಸಿಗದ ಪ್ರತಿಕ್ರಿಯೆ, ಇನ್ನೊಂದು ಕಡೆ ಸೋಲು, ಮತ್ತೊಂದು ಕಡೆ ಕರೊನಾ ಪಾಸಿಟಿವ್ ಎಂಬ ರಿಪೋರ್ಟ್ ಬಂದಿದ್ದು ... ಇವೆಲ್ಲದರಿಂದ ಗಣೇಶ್ ಸಾಕಷ್ಟು ಡೌನ್ ಆಗಿದ್ದಾರಂತೆ. ಅಷ್ಟೇ ಅಲ್ಲ, ಮುಂದಿನ ಕೆಲವು ದಿನಗಳ ಕಾಲ ನಟನೆಯಿಂದ ಸ್ವಲ್ಪ ದೂರ ಇರುವುದಕ್ಕೆ ತೀರ್ಮಾನಿಸಿದ್ದಾರಂತೆ.