ಬೆಂಗಳೂರು: ಅಶೋಕಾ ಹೋಟೆಲ್ನ ಯಾವ ಸ್ಥಳದಲ್ಲಿ ‘ಬಂಧನ’ ಚಿತ್ರಕ್ಕೆ ಮುಹೂರ್ತ ನಡೆದಿತ್ತೋ, ಅದೇ ಸ್ಥಳವನ್ನೇ ‘ಬಂಧನ 2’ ಚಿತ್ರದ ಮುಹೂರ್ತಕ್ಕೂ ಆಯ್ಕೆ ಮಾಡಿಕೊಂಡಿದ್ದರು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು. ಮೊದಲ ಚಿತ್ರದಲ್ಲಿ ನಟಿಸಿದ್ದ ಸುಹಾಸಿನಿ, ಜೈಜಗದೀಶ್ ಇಲ್ಲೂ ಇದ್ದರು. ಇಲ್ಲದವರು ವಿಷ್ಣುವರ್ಧನ್ ಮಾತ್ರ! ಹಾಗಾಗಿ, ಅವರ ಫೋಟೋ ಎದುರೇ, ‘ಬಂಧನ 2’ ಚಿತ್ರದ ಮೊದಲ ದೃಶ್ಯವನ್ನು ಚಿತ್ರೀಕರಿಸಿಕೊಂಡರು ಬಾಬು. ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. 37 ವರ್ಷಗಳ ನಂತರ ‘ಬಂಧನ’ದ ಮುಂದುವರೆದ ಭಾಗದ ಬಗ್ಗೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು. ‘ಇಡೀ ಚಿತ್ರದಲ್ಲಿ ವಿಷ್ಣು ಅವರ ಛಾಯೆ ಇರುತ್ತದೆ. ತಾಯಿ-ಮಗನ ಪ್ರೀತಿ, ಹುಡುಗ-ಹುಡುಗಿಯ ಪ್ರೀತಿ ... ಹೀಗೆ ಇಲ್ಲಿ ಎಲ್ಲಾ ತರಹದ ಪ್ರೀತಿಯೂ ಇದೆ. ವಿಷ್ಣು ಅಭಿಮಾನಿಗಳು ಸಲಹೆ, ಅಭಿಪ್ರಾಯಗಳನ್ನು ಕೊಡಬಹುದು. ಸೂಕ್ತವಾಗಿರುವುದನ್ನು ಪರಿಗಣಿಸುತ್ತೇವೆ’ ಎನ್ನುತ್ತಾರೆ.
ಕನ್ನಡದಲ್ಲಿ ನಟಿಸಿ ಬಹಳ ವರ್ಷಗಳೇ ಆಯಿತು ಎಂದು ಮಾತು ಶುರು ಮಾಡಿದ ಸುಹಾಸಿನಿ, ‘‘ಬಂಧನ ಒಂದು ಡ್ರೀಮ್ ಪ್ರಾಜೆಕ್ಟ್. ವಿಷ್ಣು ಬಗ್ಗೆ ಹೇಳೋಕೆ ಮಾತುಗಳೇ ಇಲ್ಲ. ಅವರೊಬ್ಬ ಲೆಜೆಂಡ್. ಈಗಿನ ತಲೆಮಾರಿನ ಮಕ್ಕಳು ಏನು ಮಾಡುತ್ತಾರೆ ಎನ್ನುವುದು ಈ ಚಿತ್ರದಲ್ಲಿರುತ್ತದೆ’ ಎಂದರು.
ಡಾ. ನಂದಿನಿ ಮಗನ ಪಾತ್ರದಲ್ಲಿ ನಟಿಸಲಿರುವ ಆದಿತ್ಯ, ‘ಆ ಚಿತ್ರವಾದಾಗ ನಾನು ಆರು ವರ್ಷದ ಹುಡುಗ. ಇದೇ ಜಾಗದಲ್ಲಿ ನಿಂತು ಮುಹೂರ್ತ ನೋಡಿದ್ದೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುವಾಗ ಪ್ರತಿದಿನ ಹೋಗುತ್ತಿದ್ದೆ. ಈ ಚಿತ್ರದಲ್ಲಿ ನಾನು ನಟಿಸಬಹುದು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ’ ಎಂದರು. ಅಣಜಿ ನಾಗರಾಜ್ ನಿರ್ಮಾಣ ಮತ್ತು ಛಾಯಾಗ್ರಹಣ ಮಾಡಿದರೆ, ಅಂಗಡಿ ಶಾಂತಪ್ಪ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.