ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರನ್ನು ಎಲ್ಲರೂ ಪ್ರೀತಿಯಿಂದ ಬಾಲಯ್ಯ ಎಂದೇ ಕರೆಯುತ್ತಾರೆ. ನಾಲ್ಕು ದಶಕಗಳ ಸುದೀರ್ಘ ಚಿತ್ರಪಯಣದಲ್ಲಿ ಬಾಲಯ್ಯ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಓಟಿಟಿಗಾಗಿ ‘ಅನ್ಸ್ಟಾಪಬಲ್’ ಎಂಬ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದಾರೆ. ಅದರಲ್ಲಿ ತೆಲುಗಿನ ಸೆಲೆಬ್ರಿಟಿಗಳನ್ನು ಕರೆದು ತಮ್ಮದೇ ವಿಭಿನ್ನ ಸ್ಟೈಲ್ನಲ್ಲಿ ಸಂದರ್ಶನ ಮಾಡುತ್ತಾರೆ.
ಸದ್ಯ ಇದರ ಎರಡನೇ ಸೀಸನ್ ಪ್ರಾರಂಭವಾಗಿದ್ದು, ಇತ್ತೀಚೆಗಷ್ಟೇ ವಿಶ್ವಾಕ್ ಸೇನ್ ಮತ್ತು ಸಿದ್ದು ಜೊನ್ನಲಗಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ನಟರು, ಬಾಲಯ್ಯನಿಗೆ ನಿಮ್ಮ ಸದ್ಯದ ಕ್ರಷ್ ಯಾರು ಎಂದು ಪ್ರಶ್ನಿಸಿದ್ದು, ಅದಕ್ಕೆ ಬಾಲಯ್ಯ, ರಶ್ಮಿಕಾ ಮಂದಣ್ಣ ಎಂದು ಉತ್ತರ ನೀಡಿದ್ದಾರೆ. ಆಗ ಸಿದ್ದು ಸಹ ‘ನನಗೆ ಕಿಯಾರಾ ಅಡ್ವಾನಿ ಮೇಲೆ ಕ್ರಷ್ ಇದೆ’ ಎಂದು ಹೇಳಿದ್ದಾರೆ. ಆಗ ‘ಕ್ರಷ್ ಇರುವ ನಟಿಯರ ಜತೆ ರೊಮ್ಯಾಂಟಿಕ್ ಸೀನ್ ಇದ್ದರೆ ಚಂದ’ ಎಂದಿದ್ದಾರೆ ಬಾಲಯ್ಯ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಂತ ಬಾಲಯ್ಯ, ರಶ್ಮಿಕಾ ಬಗ್ಗೆ ಮಾತನಾಡಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ‘ಪುಷ್ಪ - ದಿ ರೈಸ್’ ಚಿತ್ರದ ಪ್ರಚಾರಕ್ಕಾಗಿ ನಾಯಕ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅನ್ಸ್ಟಾಪಬಲ್ ಕಾರ್ಯಕ್ರಮಕ್ಕೆ ಹೋಗಿದ್ದರು. ಆಗಲೂ ಬಾಲಯ್ಯ, ರಶ್ಮಿಕಾರನ್ನು ಕನ್ನಡದಲ್ಲೇ ಹೊಗಳಿದ್ದರು. ಇನ್ನು ಕಳೆದ ವರ್ಷ ಬಿಡುಗಡೆಯಾದ ‘ಅಖಂಡ’ ಚಿತ್ರದ ಯಶಸ್ಸಿನ ಬಳಿಕ ಬಾಲಯ್ಯ ಸದ್ಯ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ಚಿತ್ರದಲ್ಲಿ ಬಿಜಿಯಾಗಿದ್ದಾರೆ.