ಬೆಂಗಳೂರು: ಹಲವು ಬದಲಾವಣೆ ಮತ್ತು ಏರಿಳಿತಗಳ ನಡುವೆ ಅ. 29ರ ಶುಕ್ರವಾರ ನಟ ಶಿವರಾಜಕುಮಾರ್ ನಟನೆಯ "ಭಜರಂಗಿ 2' ಸಿನಿಮಾ ತೆರೆಕಂಡಿತ್ತು. ಆದರೆ, ಆ ಬಿಡುಗಡೆಯ ಸಂಭ್ರಮ ಇದ್ದದ್ದು ಕೇವಲ ಒಂದು ಶೋಗೆ ಮಾತ್ರ. ಪುನೀತ್ ಅಕಾಲಿಕ ಸಾವಿನಿಂದಾಗಿ ಚಿತ್ರ ನಿರ್ಮಾಪಕರು, ಸಿನಿಮಾ ಪ್ರದರ್ಶನ ರದ್ದು ಮಾಡಿದ್ದರು. ಇದೀಗ ಎರಡು ದಿನಗಳ ಬಳಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಶುರುವಾಗಿದೆ.
ರಾಜ್ಯದ 300ಕ್ಕೂ ಅಧಿಕ ಪರದೆಗಳ ಮೇಲೆ ಹರ್ಷ ನಿರ್ದೇಶನದ "ಭಜರಂಗಿ 2' ಸಿನಿಮಾ ಮತ್ತೆ ಓಟ ಮುಂದುವರಿಸಿದೆ. ಈ ಕುರಿತು "ವಿಜಯವಾಣಿ' ಜತೆಗೆ ಮಾತನಾಡಿದ ನಿರ್ಮಾಪಕ ಜಯಣ್ಣ, "ಸಿನಿಮಾ ಯಾವುದೇ ಕಾರಣಕ್ಕೂ ನಿಲ್ಲಬಾರದು, ಪ್ರದರ್ಶನ ಮುಂದುವರಿಯಲಿ ಎಂದು ಸ್ವತಃ ಶಿವಣ್ಣ ಹೇಳಿಕೊಂಡಿದ್ದರು. ಆದರೆ, ಎಲ್ಲ ಕಾರ್ಯ ಮುಗಿದ ಮೇಲೆಯೇ ಆರಂಭಿಸುವುದಾಗಿ ಹೇಳಿದ್ದೆ. ಅದರಂತೆ ಭಾನುವಾರ ಬೆಳಗ್ಗೆ 10 ಗಂಟೆಯಿಂದಲೇ ರಾಜ್ಯಾದ್ಯಂತ "ಭಜರಂಗಿ 2' ಸಿನಿಮಾ ಪ್ರದರ್ಶನ ಪ್ರಾರಂಭವಾಗಿದೆ' ಎನ್ನುತ್ತಾರೆ.