ಬೆಂಗಳೂರು: ಅಭಿಷೇಕ್ ಅಂಬರೀಷ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ಹೇಗಿರಲಿದೆ ಎಂಬುದಕ್ಕೆ ಇದುವರೆಗೂ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಭಿಷೇಕ್ ಪಾತ್ರವೇನು, ಚಿತ್ರ ಹೇಗಿರಲಿದೆ? ಎಂಬ ವಿಚಾರವೂ ಗುಟ್ಟಾಗಿಯೇ ಇತ್ತು. ಇದೀಗ ಅಭಿಷೇಕ್ ಬರ್ತ್ಡೇ ಪ್ರಯುಕ್ತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ‘ದುನಿಯಾ’ ಸೂರಿ ಸಿನಿಮಾ ಅಂದಮೇಲೆ ಅದೊಂದು ಕೌತುಕದ ಕೋಟೆ ಇದ್ದಂತೆ. ಚಿತ್ರವಿಚಿತ್ರ ಪಾತ್ರಗಳು ಮತ್ತು ಚಿತ್ರಕತೆಯ ಮೂಲಕವೇ ಒಂದಷ್ಟು ಪ್ರಯೋಗಗಳಾಗಿರುತ್ತವೆ. ಈ ಹಿಂದಿನ ಸಿನಿಮಾಗಳಲ್ಲಿ ಅವೆಲ್ಲವೂ ಸಾಬೀತಾಗಿವೆ. ಇದೀಗ ‘ಬ್ಯಾಡ್ ಮ್ಯಾನರ್ಸ್’ನಲ್ಲಿ ಅಭಿಷೇಕ್ ಅಂಬರೀಷ್ಗೆ ಪೊಲೀಸ್ ಕ್ಯಾಪ್ ತೊಡಿಸಿ, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ. ಟೀಸರ್ನಲ್ಲಿ ರಗಡ್ ಆಗಿಯೇ ಮಿಂಚು ಹರಿಸಿದ್ದಾರೆ.
ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿರುವ ಸೂರಿ, ನಾಳೆಯಿಂದ (ಅ.5) ಮತ್ತೆ ಶೂಟಿಂಗ್ ಆರಂಭಿಸಲಿದ್ದಾರೆ. ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ಚರಣ್ರಾಜ್ ಸಂಗೀತ, ಶೇಖರ್ ಸಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆ.ಎಂ. ಸುಧೀರ್ ಈ ಚಿತ್ರದ ನಿರ್ವಪಕರು.