ಸಿನಿವಾಣಿ

ಸೂರಿ-ಅಭಿ ಕಾಂಬಿನೇಷನ್​ನಲ್ಲಿ: ಬ್ಯಾಡ್ ಮ್ಯಾನರ್ಸ್ ಅಂಬಿ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್

ಬೆಂಗಳೂರು: ಅಭಿಷೇಕ್ ಅಂಬರೀಷ್ ಅಭಿನಯದಲ್ಲಿ ‘ದುನಿಯಾ’ ಸೂರಿ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಆ ಸುದ್ದಿ ನಿಜವಾಗಿದೆ. ಆ ಚಿತ್ರಕ್ಕೆ ‘ಬ್ಯಾಡ್ ಮ್ಯಾನರ್ಸ್’ ಎಂಬ ಹೆಸರೂ ಸಹ ಇಡಲಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್, ಲಾಕ್​ಡೌನ್ ಮುಗಿದ ನಂತರ ಪ್ರಾರಂಭವಾಗಲಿದೆ. ಈಗಾಗಲೇ ಚಿತ್ರದ ಫೋಟೋ ಶೂಟ್ ಮುಗಿದಿದ್ದು, ನಾಳೆ (ಮೇ 29) ಅಂಬರೀಷ್ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ, ಸಿನಿಮಾ ಅಧಿಕೃತವಾಗಿ ಪ್ರಾರಂಭವಾಗಲಿದೆ. ಕಳೆದ ವರ್ಷ ಅಂಬರೀಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅಭಿಷೇಕ್ ಅಭಿನಯದ ‘ಅಮರ್’ ಬಿಡುಗಡೆಯಾಗಿತ್ತು. ಈ ವರ್ಷ, ಎರಡನೆಯ ಚಿತ್ರಕ್ಕೆ ಚಾಲನೆ ಸಿಗಲಿದೆ.

‘ಬ್ಯಾಡ್ ಮ್ಯಾನರ್ಸ್’ ಚಿತ್ರವನ್ನು ಕೆ.ಎಂ. ಸುಧೀರ್ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರವನ್ನು ನಿರ್ವಿುಸಿದ್ದ ಸುಧೀರ್, ಇದೀಗ ಸ್ಟುಡಿಯೋ 18 ಬ್ಯಾನರ್​ನಡಿ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಇನ್ನು ಸೂರಿಗೆ ಕಥೆ-ಚಿತ್ರಕಥೆ ರಚನೆಯಲ್ಲಿ ಸುರೇಂದ್ರನಾಥ್ ಮತ್ತು ಅಮೃತಾ ಭಾರ್ಗವ್ ಜತೆಯಾಗಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದರೆ, ಶೇಖರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಮತ್ತು ಇತರ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.