ಸಿನಿವಾಣಿ

ಮತ್ತೆ ಬಂದ್ರು ನಮಗಾಗಿ

vijayavani

ಬೆಂಗಳೂರು: 2015ರಲ್ಲಿ ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆಯಲ್ಲಿ ‘ನಮಗಾಗಿ’ ಸಿನಿಮಾ ಸೆಟ್ಟೇರಿತ್ತು. ಒಳ್ಳೆಯ ಫೋಟೋಶೂಟ್ ಮಾಡಿಸಿ ಚಿತ್ರೀಕರಣಕ್ಕೂ ಚಾಲನೆ ಕೊಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಇನ್ನೇನು ಸಿನಿಮಾ ಟೇಕ್ ಆಫ್ ಆಗಲ್ಲ ಎಂದೇ ಹೇಳಲಾಗಿತ್ತು. ಹೀಗಿರುವಾಗಲೇ ‘ನಮಗಾಗಿ’ ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಅಂದರೆ, ನಿಂತಿದ್ದ ಸಿನಿಮಾಕ್ಕೆ ಇನ್ನು ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದೆ.

ನಿರ್ದೇಶಕ ರಘುರಾಮ್ ‘ನಮಗಾಗಿ’ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಈಗ ನಿಂತಿದ್ದ ಚಿತ್ರಕ್ಕೆ ಮರುಜೀವ ಬಂದಿದ್ದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ‘ನಿಜಕ್ಕೂ ಈ ಸಿನಿಮಾ ಮತ್ತೆ ಶುರುವಾಗಲಿದೆ ಎಂದು ನಾನು ಅಂದುಕೊಂಡಿರಲಿಲ್ಲ. ಸಿನಿಮಾ ನಿಂತಿದ್ದಕ್ಕೆ ಬೇಸರವಿತ್ತು. ಹೀಗಿರುವಾಗ ಕಳೆದ ಕೆಲ ದಿನಗಳ ಹಿಂದಷ್ಟೇ, ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ವಿರಾಜ್ ಕರೆ ಮಾಡಿ ಸಿನಿಮಾ ಮುಂದುವರಿಸುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ರಾಧಿಕಾ ಅವರೇ ನಿರ್ವಣಕ್ಕೆ ಮನಸು ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಇನ್ನು ಕೆಲ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ’ ಎನ್ನುತ್ತಾರೆ ರಘುರಾಮ್

ಈ ಮೊದಲು ಚಿತ್ರದ ಒಂದಷ್ಟು ಸಾಹಸ ಮತ್ತು ಕೆಲವೊಂದಿಷ್ಟು ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾ ನಿಂತ ಬಳಿಕ ಆ ದೃಶ್ಯಗಳನ್ನು ನೋಡುವುದಕ್ಕೂ ರಘುರಾಮ್ ಮನಸ್ಸು ಮಾಡಿರಲಿಲ್ಲ. ಈಗ ಚಿತ್ರ ಮತ್ತೆ ಶುರುವಾಗಲಿರುವುದರಿಂದ ಸಂಕ್ರಾಂತಿ ವೇಳೆಗೆ ಹಳೇ ದೃಶ್ಯಗಳನ್ನು ರಾಧಿಕಾ ಮತ್ತು ವಿಜಯ್ ರಾಘವೇಂದ್ರ ವೀಕ್ಷಿಸಲಿದ್ದಾರೆ. ಬಳಿಕ ಮುಂದಿನ ತಯಾರಿಗೆ ಸಿದ್ಧವಾಗಲಿದೆ ಚಿತ್ರತಂಡ.

ಈ ಮೊದಲು ಸಿನಿಮಾಕ್ಕಾಗಿ ಯಾವೆಲ್ಲ ತಂತ್ರಜ್ಞರು ಕೆಲಸ ಮಾಡಿದ್ದರೋ, ಅವರೆಲ್ಲರೂ ಇಲ್ಲಿ ಮುಂದುವರಿಯಲಿದ್ದಾರೆ. ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ‘ನಮಗಾಗಿ’ ಚಿತ್ರ ಹೊಸ ರೂಪದಲ್ಲಿ ಬರಲಿದೆ. | ರಘುರಾಮ್ ನಿರ್ದೇಶಕ.