ಚಿತ್ರ: ಬ್ಯಾಕ್ ಬೆಂಚರ್ಸ್
ನಿರ್ದೇಶನ ಮತ್ತು ನಿರ್ಮಾಣ: ಬಿ.ಆರ್. ರಾಜಶೇಖರ್
ತಾರಾಗಣ: ರಂಜನ್, ಜತಿನ್, ಮಾನ್ಯಾ, ಸುಚೇಂದ್ರ ಪ್ರಸಾದ್, ಶಶಾಂಕ್, ಕುಂಕುಮ್, ಚತುರ್ಥಿ ರಾಜ್ ಮುಂತಾದವರು.
ಪ್ರತಿ ಶಾಲೆ, ಕಾಲೇಜುಗಳಲ್ಲೂ ಕೊನೆಯ ಬೆಂಚ್ನಲ್ಲಿ ಕುಳಿತುಕೊಳ್ಳುವ ಒಂದು ಗ್ಯಾಂಗ್ ಇರುತ್ತದೆ. ಓದಿನಲ್ಲಿ ಹಿಂದಿದ್ದರೂ ಉಳಿದೆಲ್ಲ ವಿಷಯಗಳಲ್ಲೂ ಮುಂದಿರುವ ಗಲಾಟೆ ಗ್ಯಾಂಗ್. ಅಂತಹ ಒಂದು ಗ್ಯಾಂಗ್ನ ಹುಡುಗರ ಕಥೆ "ಬ್ಯಾಕ್ ಬೆಂಚರ್ಸ್'. ಹಾಗಂತ ಲಾಸ್ಟ್ ಬೆಂಚ್ನಲ್ಲಿ ಕೂರುವ ಹುಡುಗರೆಲ್ಲರೂ ಕೆಟ್ಟವರು ಓದಿನಲ್ಲೂ ಲಾಸ್ಟ್ ಅಂತಲ್ಲ. ಹಾಗೇ ಫಸ್ಟ್ ಬೆಂಚ್ನಲ್ಲಿ ಕೂರುವವರೆಲ್ಲರೂ ಒಳ್ಳೆಯವರು, ಓದಿನಲ್ಲೂ ಫಸ್ಟ್ ಅಂತನೂ ಅಲ್ಲ. ಆದರೆ, ಫಸ್ಟ್ ಬೆಂಚ್ನಲ್ಲಿ ಕೂರುವ ಹುಡುಗರು ಲಾಸ್ಟ್ ಬೆಂಚ್ಗೆ ಹೋದಾಗ, ಅವರ ತಲೆ ಓದು ಬಿಟ್ಟು ಬೇರೆಲ್ಲ ಕಡೆ ತಿರುಗುತ್ತದೆ. ಹಾಗೇ ಲಾಸ್ಟ್ ಬೆಂಚ್ನಲ್ಲಿ ಕೂರುವ ಹುಡುಗರು ಫಸ್ಟ್ ಬೆಂಚ್ಗೆ ಬಂದಾಗ, ಅವರ ತಲೆ ಓದಿನತ್ತ ತಿರುಗುತ್ತದೆ. ಇದನ್ನು ಹಾಸ್ಯದ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಬಿ.ಆರ್. ರಾಜಶೇಖರ್.
ಅದು ಎನ್ಎಸ್ಬಿ ಅಕಾಡೆಮಿ. ಖುಷ್, ಅನುಷ್ಕಾ, ಮಾಯಾ, ವಿಕ್ಕಿ, ನವೀನ್, ನಿಶಾ, ಆರ್ಯ, ದೀಪಿಕಾ ಒಂದು ಗ್ಯಾಂಗ್. ಇನ್ನೊಂದು ದುಶ್ಯಂತ್ ಮತ್ತು ಚೈತ್ರಾ ಸೇರಿ ನಾಲ್ವರದು ಗಲಾಟೆ ಗ್ಯಾಂಗ್. "ಫಸ್ಟ್ ಬೆಂಚ್ನಲ್ಲಿ ಪಾಠ ಕೇಳಿಸುತ್ತೆ. ಆದರೆ, ಲಾಸ್ಟ್ ಬೆಂಚ್ ಪಾಠ ಕಲಿಸುತ್ತೆ' ಎಂಬ ಡೈಲಾಗ್ ಚಿತ್ರದಲ್ಲಿದೆ. ಸ್ಟ್ ಬೆಂಚ್ನಲ್ಲಿ ಕೂರುತ್ತಿದ್ದ ಖುಷ್, ವಿಕ್ಕಿ, ನವೀನ್, ಆರ್ಯರನ್ನು ಪ್ರಿನ್ಸಿಪಲ್ ಲಾಸ್ಟ್ ಬೆಂಚ್ಗೆ ಕಳುಹಿಸುತ್ತಾರೆ. ಹಾಗೇ ಲಾಸ್ಟ್ ಬೆಂಚ್ನಲ್ಲಿದ್ದ ಗಲಾಟೆ ಗ್ಯಾಂಗ್ಅನ್ನು ಮೊದಲ ಬೆಂಚ್ನಲ್ಲಿ ಕೂರಿಸುತ್ತಾರೆ. ಅದಕ್ಕೆ ಕಾರಣ ಸ್ಟ್ ಬೆಂಚ್ನ ಬುದ್ಧಿವಂತ ಹುಡುಗರು ಎಲ್ಲಿ ಕುಳಿತರೂ ಓದುತ್ತಾರೆ ಎಂಬ ನಂಬಿಕೆ. ಆದರೆ, ಕೊನೆಯ ಬೆಂಚ್ಗೆ ಹೋಗುತ್ತಲೇ ಆರ್ಯ ಮತ್ತು ತಂಡದ ತಲೆ ತಿರುಗಿಬಿಡುತ್ತದೆ. ಸಿಗರೇಟ್, ಮದ್ಯಪಾನ, ಪಾರ್ಟಿ, ಡ್ರಗ್ಸ್ ಅಂತ ಅಡ್ಡದಾರಿ ಹಿಡಿದುಬಿಡುತ್ತಾರೆ. ಕೊನೆಗೆ ಆರ್ಯ ಮತ್ತು ಗೆಳೆಯರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಚಡ್ಡಿಯಲ್ಲಿ ಕೂರುವ ದುಸ್ಥಿತಿ. ಹೀಗೆ ದಾರಿತಪ್ಪಿದ ಮಕ್ಕಳು ಸರಿದಾರಿಗೆ ಬರುತ್ತಾರಾ? ಲಾಸ್ಟ್ ಬೆಂಚ್ನಲ್ಲಿದ್ದುಕೊಂಡೇ ಓದಿನಲ್ಲಿ ಸ್ಟ್ ಆಗುತ್ತಾರಾ? ಮುಂದೇನಾಗುತ್ತೆ ಎಂಬುದೇ "ಬ್ಯಾಕ್ ಬೆಂಚರ್ಸ್'.
ಆರ್ಯ (ರಂಜನ್) ತಂದೆ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಗಮನ ಸೆಳೆಯುತ್ತಾರೆ. ಹಿಂದೆಂದೂ ನಟಿಸದ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. ಅವರೇ ಚಿತ್ರದ ಹೈಲೈಟ್ ಎಂದರೂ ತಪ್ಪಲ್ಲ. ರಂಜನ್, ಜತಿನ್, ಮಾನ್ಯಾ, ಶಶಾಂಕ್, ಕುಂಕುಮ್, ಚತುರ್ಥಿ ರಾಜ್ ಅವರಂತಹ ಹೊಸ ಪ್ರತಿಭೆಗಳು ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತದ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಮನೋಹರ್ ಜೋಶಿ ಛಾಯಾಗ್ರಹಣ, ಅಮರ್ ಗೌಡ ಸಂಕಲನ ಚಿತ್ರವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತದೆ. 125 ನಿಮಿಷಗಳ ಚಿತ್ರವಾದ ಕಾರಣ ಎಲ್ಲೂ ಹೆಚ್ಚು ಬೋರ್ ಅನ್ನಿಸುವುದಿಲ್ಲ. ಪೋಲಿ ಹುಡುಗರ ಜಾಲಿ ಜರ್ನಿಯಲ್ಲಿ ಒಂದೊಳ್ಳೆ ಸಂದೇಶವನ್ನೂ ನೀಡಲಾಗಿದೆ.