ಸಿನಿವಾಣಿ

ಬಾಹುಬಲಿ ಪಾತ್ರವನ್ನು ಪ್ರಭಾಸ್​ ಬದಲು ಹೃತಿಕ್​ ಮಾಡಬೇಕಿತ್ತಾ? ವರ್ಷಗಳ ವದಂತಿಗೆ ಕೊನೆಗೂ ಬಿತ್ತು ತೆರೆ! Baahubali

Baahubali : ಟಾಲಿವುಡ್ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದ ನಿರ್ದೇಶಕ ಯಾರೆಂದು ಪ್ರಶ್ನೆ ಮಾಡಿದರೆ ಥಟ್ಟನೆ ನೆನಪಿಗೆ ಬರುವ ಹೆಸರು ಎಸ್​.ಎಸ್​. ರಾಜಮೌಳಿ. ಅವರ ನಿರ್ದೇಶನದ ಬಾಹುಬಲಿ ದಿ ಬಿಗಿನಿಂಗ್ ಮತ್ತು ಬಾಹುಬಲಿ ದಿ ಕನ್​ಕ್ಲೂಸನ್​ ಸಿನಿಮಾಗಳು ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವು. ಈ ಮಾತು ಸಾರ್ವಕಾಲಿಕ ಸತ್ಯ ಕೂಡ ಹೌದು.

ಬಾಹುಬಲಿ ನಂತರ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್. ಕೂಡ ಆಸ್ಕರ್ ಖ್ಯಾತಿಯನ್ನು ಗಳಿಸಿತು. ತೆಲುಗು ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ತಂದ ರಾಜಮೌಳಿ ಮತ್ತೊಮ್ಮೆ ಬಾಹುಬಲಿಯನ್ನು ಅಭಿಮಾನಿಗಳಿಗೆ ತಲುಪಿಸುತ್ತಿದ್ದಾರೆ. ಎರಡೂ ಭಾಗಗಳನ್ನು ಒಟ್ಟುಗೂಡಿಸಿ ಬಾಹುಬಲಿ ದಿ ಎಪಿಕ್ ಹೆಸರಿನಲ್ಲಿ ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರ ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆ ಸಂದರ್ಭದಲ್ಲಿ, ಬಾಹುಬಲಿ ನಿರ್ಮಾಪಕ ಶೋಭು ಯಾರ್ಲಗಡ್ಡ ಇತ್ತೀಚೆಗೆ ಒಂದು ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಹಲವು ದಿನಗಳಿಂದ ವೈರಲ್ ಆಗುತ್ತಿರುವ ಸುದ್ದಿಯ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಆ ಸುದ್ದಿ ಏನೆಂದರೆ, ಬಾಹುಬಲಿ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಪ್ರಭಾಸ್ ಅಲ್ಲ, ಬದಲಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಎಂಬುದು. ಈ ಕುರಿತಾದ ಅನೇಕ ವದಂತಿಗಳು ಈ ಹಿಂದೆಯೇ ಹಬ್ಬಿದ್ದವು. ಈ ಸುದ್ದಿಗಳಿಗೆ ನಿರ್ಮಾಪಕ ಶೋಭು ಯಾರ್ಲಗಡ್ಡ ಇದೀಗ ಪ್ರತಿಕ್ರಿಯಿಸಿದ್ದಾರೆ.

ಬಾಹುಬಲಿಯಲ್ಲಿ ಪ್ರಭಾಸ್ ಪಾತ್ರಕ್ಕಾಗಿ ನಾವು ಹೃತಿಕ್ ಅವರನ್ನು ಸಂಪರ್ಕಿಸಿದ್ದೇವೆ ಎಂಬ ಸುದ್ದಿ ಹಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಅದೆಲ್ಲ ಕೇವಲ ಊಹಾಪೋಹ ಎನ್ನುವ ಮೂಲಕ ವದಂತಿಯನ್ನು ತಳ್ಳಿಹಾಕಿದರು. ಈ ಚಿತ್ರವನ್ನು ಪ್ರಭಾಸ್‌ಗಾಗಿ ಮಾತ್ರ ಸಿದ್ಧಪಡಿಸಲಾಯಿತು ಎಂದು ಶೋಭು ಬಹಿರಂಗಪಡಿಸಿದರು. ಆರಂಭದಿಂದಲೂ ಪ್ರಭಾಸ್‌ ಅವರನ್ನು ಗಮನದಲ್ಲಿಟ್ಟುಕೊಂಡು ಈ ಪಾತ್ರವನ್ನು ಬರೆಯಲಾಗಿದೆ. ಬೇರೆ ಯಾವುದೇ ನಟರನ್ನು ಆಡಿಷನ್ ಮಾಡಲಾಗಿಲ್ಲ ಎಂದು ಹೇಳಿದರು. ಈ ಮೂಲಕ ಹೃತಿಕ್ ರೋಷನ್ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಗಿದೆ ಎಂಬ ದೀರ್ಘಕಾಲದ ವದಂತಿಗಳಿಗೆ ನಿರ್ಮಾಪಕ ಯಾರ್ಲಗಡ್ಡ ಅವರು ಕಡಿವಾಣ ಹಾಕಿದ್ದಾರೆ.

ಬಾಹುಬಲಿ ನಿರ್ದೇಶಕ ರಾಜಮೌಳಿ 2009 ರಲ್ಲಿ ಹೃತಿಕ್ ರೋಷನ್ ಬಗ್ಗೆ ನೀಡಿದ ಹೇಳಿಕೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಮೆಹರ್ ರಮೇಶ್ ನಿರ್ದೇಶನದ ಬಿಲ್ಲಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಾಜಮೌಳಿ ಮಾತನಾಡಿದ್ದರು. ಧೂಮ್ -2 ಬಿಡುಗಡೆಯಾದಾಗ, ಬಾಲಿವುಡ್ ಮಾತ್ರ ಏಕೆ ಅಂತಹ ಗುಣಮಟ್ಟದ ಚಿತ್ರಗಳನ್ನು ಮಾಡಲು ಸಾಧ್ಯವಾಯಿತು. ಹೃತಿಕ್ ರೋಷನ್ ಅವರಂತಹ ನಾಯಕರು ನಮ್ಮಲ್ಲಿ ಇಲ್ಲವೇ? ನಾನು ಬಿಲ್ಲಾ ಚಿತ್ರದ ಹಾಡುಗಳು, ಪೋಸ್ಟರ್ ಮತ್ತು ಟ್ರೇಲರ್ ನೋಡಿದ್ದೇನೆ. ನಾನು ಒಂದೇ ಒಂದು ವಿಷಯವನ್ನು ಹೇಳಬಲ್ಲೆ ಅದೇನೆಂದರೆ, ಹೃತಿಕ್ ರೋಷನ್, ಪ್ರಭಾಸ್ ಮುಂದೆ ಏನೂ ಅಲ್ಲ ಎಂದಿದ್ದರು.

ತೆಲುಗು ಚಿತ್ರರಂಗವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದಿದ್ದಕ್ಕಾಗಿ ಮೆಹರ್ ರಮೇಶ್ (ನಿರ್ದೇಶಕ) ಅವರಿಗೆ ಧನ್ಯವಾದ ಅರ್ಪಿಸಿದರು. ಈ ಹೇಳಿಕೆಗಳು ವಿವಾದಕ್ಕೆ ಕಾರಣವಾದ ನಂತರ, ರಾಜಮೌಳಿ ಸ್ಪಷ್ಟನೆ ನೀಡಿದರು. ಹೃತಿಕ್​ ರೋಷನ್​ ಅವರನ್ನು ಎಂದಿಗೂ ಕೀಳಾಗಿ ನೋಡುವುದು ನಮ್ಮ ಉದ್ದೇಶವಲ್ಲ ಎಂದು ಹೇಳಿದರು. ಅಲ್ಲದೆ, ಹೃತಿಕ್ ರೋಷನ್ ಅವರನ್ನು ತುಂಬಾ ಗೌರವಿಸುತ್ತೇನೆ ಎಂದಿದ್ದರು. (ಏಜೆನ್ಸೀಸ್​)