ಸಿನಿವಾಣಿ

ಸೆಟ್ಟೇರಿತು ‘ಅಯೋಗ್ಯ-2’: ಮತ್ತೊಮ್ಮೆ ತೆರೆ ಮೇಲೆ ಬರಲಿದೆ ಸಿದ್ದೇಗೌಡ- ನಂದಿನಿ ಲವ್‌ಸ್ಟೋರಿ

ಬೆಂಗಳೂರು: ಸತೀಶ್ ನೀನಾಸಂ, ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ 2018ರಲ್ಲಿ ಮೂಡಿಬಂದಿದ್ದ ‘ಅಯೋಗ್ಯ’ ಹಿಟ್ ಕಂಡಿತ್ತು. ಇದೀಗ, ಈ ಚಿತ್ರದ ಸೀಕ್ವೆಲ್ ಮಾಡಲು ನಿರ್ದೇಶಕ ಮಹೇಶ್ ಮುಂದಾಗಿದ್ದು, ಆರು ವರ್ಷಗಳ ಬಳಿಕ ಸಿದ್ದೇಗೌಡ ಹಾಗೂ ನಂದಿನಿ ಲವ್‌ಸ್ಟೋರಿಯನ್ನು ಮತ್ತೊಮ್ಮೆ ತೆರೆ ಮೇಲೆ ಸಿದ್ಧರಾಗಿದ್ದಾರೆ. ಕಳೆದ ಡಿ.3ರಂದು ಚಿತ್ರತಂಡವು ವಿಶೇಷ ವಿಡಿಯೋ ಮೂಲಕ ‘ಅಯೋಗ್ಯ-2’ ಚಿತ್ರವನ್ನು ಘೋಷಿಸಿತ್ತು. ಅಂತೆಯೇ, ಬುಧವಾರ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಸತೀಶ್ ನೀನಾಸಂ, ‘ಈ ಹೊಸ ಸಿನಿಮಾಕ್ಕೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ, ಕೊನೆಯದಾಗಿ ಮುನೇಗೌಡ ಅವರನ್ನು ಫೈನಲ್ ಮಾಡಿದೆವು. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು. ನಟಿ ರಚಿತಾ ರಾಮ್, ‘ಆರು ವರ್ಷಗಳ ಹಿಂದೆ ‘ಅಯೋಗ್ಯ’ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಕಂಡಿತ್ತು. ಇದೀಗ ಸೀಕ್ವೆಲ್ ಕೂಡ ಇಲ್ಲೇ ಪೂಜೆ ನೆರವೇರಿರುವುದಕ್ಕೆ ಖುಷಿಯಿದೆ. ಅಶ್ವಿನಿ ಮೇಡಂ ಆಶೀರ್ವಾದವಿದೆ. ಈ ಚಿತ್ರದಲ್ಲಿ ನಾನು, ಸತೀಶ್ ಟಾಮ್- ಜೆರ‌್ರಿ ತರ ಕಿತ್ತಾಡುತ್ತಿರುತ್ತೇವೆ’ ಎಂದರು. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಮಾಸ್ತಿ ಸಂಭಾಷಣೆ, ವಿಶ್ವಜಿತ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಎಸ್‌ವಿಸಿ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ಮುನೇಗೌಡ ಬಂಡವಾಳ ಹಾಕಿದ್ದಾರೆ.

ಫ್ಯಾನ್ ಇಂಡಿಯಾ ಸಿನಿಮಾ:ನಿರ್ದೇಶಕ ಮಹೇಶ್ ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ತರುತ್ತಿದ್ದಾರೆ. ‘ಅಯೋಗ್ಯ-2’ ಕನ್ನಡದ ಜತೆಗೆ ತಮಿಳು, ತೆಲುಗಿನಲ್ಲಿ ಮೂಡಿಬರಲಿದೆ. ಆದರೆ, ಇದು ಪ್ಯಾನ್ ಇಂಡಿಯಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಅಭಿಮಾಗಳಿಗಾಗಿಯೇ ಮಾಡುತ್ತಿರುವುದು. ಮೊದಲ ಭಾಗ ಹಿಟ್ ಆದ ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ದೆವು. ಆದರೀಗ ಒಟ್ಟಿಗೆ ತೆಲುಗು, ತಮಿಳಿನಲ್ಲಿ ಮಾಡುತ್ತಿದ್ದೇವೆ. ಮಂಡ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ’ ಎಂದು ಮಹೇಶ್ ಮಾಹಿತಿ ನೀಡಿದರು.