ಬೆಂಗಳೂರು: ಅಶೋಕ್ ಎನ್. ಸಾಮ್ರಾಟ್ ನಿರ್ದೇಶನ ಹಾಗೂ ಭರತ್ ಹಾಸನ್ ಅಭಿನಯದ ‘ಅವನಿರಬೇಕಿತ್ತು’ ಚಿತ್ರವು ಇಂದು ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್‌ನ ಈ ಚಿತ್ರದಲ್ಲಿ ಭರತ್‌ಗೆ ಹೊಸ ಪ್ರತಿಭೆ ಸೌಮ್ಯಾ ಜೋಡಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ಇದೀಗ ಡೆಬ್ಯೂ ಫಿಲಂ ಬಿಡುಗಡೆಯ ಖುಷಿಯಲ್ಲಿರುವ ಸೌಮ್ಯಾ ‘ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವುದು ಬಹುದಿನಗಳ ಆಸೆ. ಇದಕ್ಕೆ ಕುಟುಂಬದವರು ಕೂಡ ಬೆಂಬಲವಾಗಿ ನಿಂತಿದ್ದರು. ಅದರಲ್ಲೂ ನಮ್ಮ ತಾತ, ನಾನು ಆ್ಯಕ್ಟಿಂಗ್ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದು ಆಸೆಯಾಗಿತ್ತು. ಹೀಗಾಗಿ, ಕಾಲೇಜು ದಿನಗಳಿಂದಲೇ ಆಡಿಷನ್ ಕೊಡಲು ಮುಂದಾದೆ. ಅದೃಷ್ಟವೆಂಬಂತೆ, ಆ ಸಮಯದಲ್ಲಿ ನನಗೆ ಈ ಚಿತ್ರಕ್ಕೆ ಅವಕಾಶ ಒದಗಿಬಂತು. ಬಳಿಕ ಒಂದು ರೀತಿಯ ಭಯ ಶುರುವಾಯಿತು. ಬೆಳ್ಳಿ ಪರದೆ ಮೇಲೆ ಮಿಂಚಬೇಕು ಎಂದರೆ ಒಂದಿಷ್ಟು ಆ್ಯಕ್ಟಿಂಗ್ ಸ್ಕಿಲ್ ಕಲಿಯಬೇಕಿತ್ತು. ಚಿತ್ರೀಕರಣಕ್ಕೆ ಸ್ವಲ್ಪ ದಿನ ಕಾಲಾವಕಾಶ ಇರುವ ಕಾರಣ ರೇಖಾ ದಾಸ್ ಹತ್ತಿರ ತರಗತಿಗೆ ಸೇರಿಕೊಂಡು ಸುಮಾರು ಒಂದು ತಿಂಗಳ ಕಾಲ ಆ್ಯಕ್ಟಿಂಗ್ ಕಲಿತೆ. ಮುಖದ ಹಾವ-ಭಾವ, ಎಮೋಷನ್ಸ್ ಗಳನ್ನು ಅರಿತುಕೊಂಡೆ. ಬಳಿಕ ತಂಡ ಸೇರಿದಾಗ ನಾವು ಸ್ಕ್ರಿಪ್ಟ್ ಮೇಲೆಯೇ ವರ್ಕ್‌ಶಾಪ್ ಆರಂಭಿಸಿದೆವು. ಸುಮಾರು 15 ದಿನಗಳ ಕಾಲ ಸಿನಿಮಾ ಡೈಲಾಗ್ ಪ್ರಾಕ್ಟೀಸ್ ಮಾಡೆದೆವು. ಕ್ಯಾಮರಾ ಮುಂದೆ ಆ್ಯಕ್ಟಿಂಗ್ ಮಾಡುವಾಗ ಇದು ಸಹಾಯವಾಯಿತು. ಭವ್ಯಾ ಎಂಬ ಪಾತ್ರದಲ್ಲಿದ್ದೇನೆ. ಕೆಲಸಕ್ಕೆ ಸೇರಿಕೊಂಡ ಸಮಯದಲ್ಲಿ ಉಂಟಾಗುವ ಗೊಂದಲಗಳಿಂದ ಮುಂದೆ ಕಥೆ ಮುಂದುವರಿಯುತ್ತದೆ. ಗೊಂದಲ ನಿರ್ಮಾಣವಾದ ಒಬ್ಬರು ಇಬ್ಬರಿರಬೇಕಿತ್ತು ಅನಿಸುತ್ತದೆ. ಅದೇ ಯಾರು ಎನ್ನುವುದೇ ಸಿನಿಮಾದ ಸಸ್ಪೆನ್ಸ್. ಒಂದೊಳ್ಳೆ ಮೆಸೇಜ್ ಇದೆ. ಸಿನಿಮಾ ನೋಡಿ ಆಚೆ ಬಂದಾಗ ಒಂದು ಬಾರಿ ನಮ್ಮ ಪರ್ಸ್ ನಾವೇ ನೋಡಿಕೊಳ್ಳುವುದಂತೂ ಖಚಿತ’ ಎಂದು ನಗಾಡುತ್ತಾರೆ.
ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾತರ: ಸೌಮ್ಯಾ ‘ಅವನಿರಬೇಕಿತ್ತು’ ಬಳಿಕ ಎರಡು-ಮೂರು ಸ್ಕ್ರಿಪ್ಟ್‌ಗಳನ್ನು ಕೇಳಿದ್ದಾರೆ. ಆದರೆ, ಮೊದಲ ಸಿನಿಮಾ ಇದಾಗಿರುವುದರಿಂದ ಈ ಚಿತ್ರಕ್ಕೆ ಬರುವ ಪ್ರತಿಕ್ರಿಯೆ ನೋಡಿ ಮುಂದುವರಿಯಲು ತೀರ್ಮಾನಿಸಿದ್ದಾರೆ. ‘ಈ ಸಿನಿಮಾದ ಶೂಟಿಂಗ್ ನಡುವೆಯೇ ನನಗೆ ಎರಡು-ಮೂರು ಚಿತ್ರಗಳಿಗೆ ಅವಕಾಶ ಬಂತು. ಆದರೆ, ನನಗೆ ಜಾಸ್ತಿ ಆಸಕ್ತಿ ತೋರಲಿಲ್ಲ. ಸದ್ಯಕ್ಕೆ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾತರಾಳಾಗಿದ್ದೇನೆ. ಅಷ್ಟು ಸಾಕಷ್ಟು ಅನುಭವಗಳನ್ನು ಈ ಸಿನಿಮಾ ನೀಡಿದೆ. ಲಡಾಖ್‌ನಲ್ಲಿ ಹಾಡಿನ ಶೂಟಿಂಗ್ ನಡೆಸಿದಾಗ ತುಂಬಾ ಚಾಲೆಂಜ್ ಆಗಿತ್ತು. ನಾನ್-ಡಾನ್ಸರ್ ಆಗಿದ್ದರೂ, ಇಲ್ಲಿ ಹಾಡಿಗೆ ನೃತ್ಯ ಮಾಡಬೇಕಾಗಿ ಬಂತು.ಅದಕ್ಕಾಗಿ ಡಾನ್ಸ್ ಕಲಿಯಬೇಕಾಗಿ ಬಂತು. ಇನ್ನು ಹಿರಿಯ ನಟಿ ಲಕ್ಷ್ಮ ದೇವಮ್ಮ ಅಂತವರ ಜತೆ ಕೆಲಸ ಮಾಡಿರುವುದು ಕಲಿಕೆಯ ಜತೆಗೆ ದೊಡ್ಡ ಅನುಭವ’ ಎಂದು ಸೌಮ್ಯಾ ಹೇಳಿಕೊಳ್ಳುತ್ತಾರೆ.