ಸಿನಿವಾಣಿ

ಸಿನಿ 35ಗೆ ಸಾಕ್ಷಿಯಾದ ಚಂದನವನ

ಬೆಂಗಳೂರು: ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ವಾರ್ಷಿಕೋತ್ಸವವನ್ನೇ ಆಚರಣೆ ಮಾಡಿರದ ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘ(ಕೆಸಿಎ) ಬರೋಬ್ಬರಿ 34 ವರ್ಷಗಳ ಬಳಿಕ ಅದ್ದೂರಿಯಾಗಿ ವಾರ್ಷಿಕೋತ್ಸವ ಆಚರಿಸಿಕೊಂಡಿದೆ.

ಸಿನಿ 35 ಎಂಬ ಹೆಸರಿನಲ್ಲಿ ಇತ್ತೀಚೆಗೆ ನಗರದಲ್ಲಿ ಅದ್ದೂರಿಯಾಗಿ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವ ಸಂಘ, ಸುದೀರ್ಘ ಪ್ರಯಾಣದ ಸಂತೋಷವನ್ನು ಹಂಚಿಕೊಳ್ಳುವ ಜತೆಗೆ ಚಿತ್ರರಂಗದಲ್ಲಿ ಎಲೆಮರೆಯ ಕಾಯಿಯಂತಿದ್ದ ಹಲವರನ್ನು ಗುರುತಿಸಿ ಸನ್ಮಾನಿಸಿ ಗೌರವವನ್ನೂ ಸಲ್ಲಿಸಿದೆ. ಇದಕ್ಕೆಂದೇ ನೂರು ಕ್ಯಾಮರಾಗಳನ್ನು ಒಳಗೊಂಡ ವೇದಿಕೆಯನ್ನು ನಿರ್ವಿುಸಿ, ನೂರು ಕ್ಯಾಮರಾಮನ್​ಗಳನ್ನು ಹಾಗೂ ಅವರ ಕುಟುಂಬಸ್ಥರನ್ನು ಒಂದೆಡೆ ಸೇರಿಸಿ, 108 ಸಾಧಕರಿಗೆ ಸನ್ಮಾನವನ್ನೂ ಮಾಡಿದೆ. ಚಿತ್ರರಂಗದಲ್ಲಿನ ತೆರೆಯ ಹಿಂದಿನ ಸಾಧಕರಾದ ಗೇಟ್ ಕೀಪರ್, ಟಾರ್ಚ್ ಮ್ಯಾನ್, ಆಪರೇಟರ್, ರೀಲ್ ಸಾಗಿಸುವವರು ಸೇರಿ ಇನ್ನೂ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ 108 ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸಲಾಯಿತು. ಜತೆಗೆ ಸಾಧಕರ ಪತ್ನಿಯರಿಗೂ ಬಾಗಿನ ನೀಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾಗಳಲ್ಲಿ ಇದುವರೆಗೂ ಬಳಸಿರುವ ಕ್ಯಾಮರಾಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ನಟಿಯರಾದ ತಾರಾ, ಉಮಾಶ್ರೀ, ರಾಜಕಾರಣಿ ಕಮ್ ಕಲಾವಿದರಾದ ಕುಮಾರ್ ಬಂಗಾರಪ್ಪ, ಡಾ.ಜಯಮಾಲಾ ಆಗಮಿಸಿ ಈ ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಲ್ಲರೂ ಚಲನಚಿತ್ರ ಛಾಯಾಗ್ರಾಹಕರ ಶ್ರಮ ಮತ್ತು ಸಿನಿಮಾ ಉತ್ತಮವಾಗಿ ಮೂಡಿ ಬರಲು ಅವರು ಎದುರಿಸುವ ಸವಾಲುಗಳ ಕುರಿತು ಮಾತನಾಡಿ, ಕಲಾವಿದರನ್ನು ಅದ್ಭುತವಾಗಿ ತೆರೆ ಮೇಲೆ ತೋರಿಸುವುದು ಸಿನಿಮಾಟೋಗ್ರಾಫರ್ಸೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಯಾಮರಾಮನ್ ಮತ್ತು ಕ್ಯಾಮರಾಗಳ ವಿಶೇಷತೆಗಳನ್ನು ಸಾರುವ ಬಗ್ಗೆ ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿಬಂದಿರುವ ಹಾಡೊಂದನ್ನು ಇದೇ ಸಂದರ್ಭದಲ್ಲಿ ರಿಲೀಸ್ ಮಾಡಲಾಯಿತು.

ಈ ಹಾಡಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಡಾಲಿ ಧನಂಜಯ್, ವಿನೋದ್ ಪ್ರಭಾಕರ್ ಮುಂತಾದ ಕಲಾವಿದರು ಅಭಿನಯಿಸಿ, ಛಾಯಾಚಿತ್ರಗ್ರಾಹಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಏಳು ಗಂಟೆಗಳ ಕಾಲ ಜರುಗಿದ ಸಮಾರಂಭದಲ್ಲಿ ನಿರ್ದೇಶಕರಾದ ಭಗವಾನ್, ಸಾಯಿಪ್ರಕಾಶ್, ರೇಣುಕಾ ಶರ್ಮ, ನಿರ್ವಪಕ ಲಹರಿ ವೇಲು, ನಟ ಬ್ಯಾಂಕ್ ಜನಾರ್ದನ್, ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಕೆಸಿಎ ಅಧ್ಯಕ್ಷ ಜೆ.ಜಿ. ಕೃಷ್ಣ, ಉಪಾಧ್ಯಕ್ಷ ಎ.ವಿ.ಕೃಷ್ಣಕುಮಾರ್ ಮುಂತಾದವರು ಉಪಸ್ಥಿತರಿದ್ದರು.