ಬೆಂಗಳೂರು: ಖ್ಯಾತ ಚಿತ್ರನಟರು ಹೋದಲ್ಲೆಲ್ಲ ಜನಜಂಗುಳಿ, ನೂಕುನುಗ್ಗಲು ಉಂಟಾಗುವುದು ಸರ್ವೇಸಾಮಾನ್ಯ. ಅದೇರೀತಿಯ ಒಂದು ಸ್ಟಾರ್ನಟರೊಬ್ಬರ ಸಂಚಾರದ ವೇಳೆ ಅವರ ಆಪ್ತಸಹಾಯಕನ ಮೇಲೆ ಹಲ್ಲೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಹೀಗೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿನ್ನೆ ರಾತ್ರಿ ಈ ಪ್ರಕರಣ ನಡೆದಿದ್ದು, ಈ ಕುರಿತ ಮಾಹಿತಿ ತಡವಾಗಿ ಬಹಿರಂಗಗೊಂಡಿದೆ. ನಿನ್ನೆ ರಾತ್ರಿ ವಿಜಯ್ ಸೇತುಪತಿ ವಿಮಾನನಿಲ್ದಾಣದಲ್ಲಿ ಸಾಗುತ್ತಿದ್ದಾಗ ಅವರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಾಗ ಆಪ್ತಸಹಾಯಕ ಅಲ್ಲಿದ್ದ ವ್ಯಕ್ತಿಯೊಬ್ಬರನ್ನು ತಳ್ಳಿಕೊಂಡು ಮುಂದೆ ಹೋಗಿದ್ದ ಎನ್ನಲಾಗಿದೆ.
ಇದರಿಂದ ಸಿಟ್ಟಾದ ಆ ವ್ಯಕ್ತಿ ಏಕಾಏಕಿ ಮುನ್ನುಗ್ಗಿ ಆಪ್ತಸಹಾಯಕನ ಮೈಮೇಲೆರಗಿ, ತುಳಿದಿದ್ದಾನೆ. ಈ ಸಂದರ್ಭದಲ್ಲಿ ಸಣ್ಣ ಸಂಘರ್ಷ ಉಂಟಾಗಿದ್ದು, ಸ್ಥಳದಲ್ಲೇ ಇದ್ದ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ವಿಮಾನನಿಲ್ದಾಣ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.