ತೆಲುಗು ನಟಿ ಆಶು ರೆಡ್ಡಿ 
ಸಿನಿವಾಣಿ

ಆ ಕಾರಣಕ್ಕೆ ನನ್ನ ಮೇಲೆ 9.5 ಕೋಟಿ ರೂ. ಸುರಿದ! ಹೈಕೋರ್ಟ್​ನಲ್ಲಿ ಸ್ಫೋಟಕ ಸಂಗತಿ ರಿವೀಲ್​ ಮಾಡಿದ ಆಶು ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • ಸಮಂತಾರನ್ನೇ ಹೋಲುವ ಆಶು ರೆಡ್ಡಿ ಟಾಲಿವುಡ್​ನಲ್ಲಿ ಜೂನಿಯರ್​ ಸಮಂತಾ ಅಂತಾನೇ ಫೇಮಸ್​
  • ಆಗಾಗ ಬೋಲ್ಡ್​ ಅವತಾರವನ್ನು ತಾಳುವ ಮೂಲಕ ವಿವಾದಕ್ಕೆ ಗುರಿಯಾಗುವ ಆಶು ರೆಡ್ಡಿ
  • ಹೈಕೋರ್ಟ್​ನಲ್ಲಿ ಆಶು ರೆಡ್ಡಿ ವಂಚನೆ ಪ್ರಕರಣ ಅರ್ಜಿ ವಿಚಾರಣೆ
ತೆಲಂಗಾಣ: ಮದುವೆಯ ಹೆಸರಿನಲ್ಲಿ ಅನಿವಾಸಿ ಭಾರತೀಯ ವೈ.ವಿ. ಧರ್ಮೇಂದ್ರ ಅವರಿಗೆ 9.5 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿರುವ ತೆಲುಗು ನಟಿ ಆಶು ರೆಡ್ಡಿ (Ashu Reddy) ಪ್ರಕರಣದಲ್ಲಿ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದರೂ, ಇತ್ತೀಚೆಗೆ ಆಶು ರೆಡ್ಡಿಗೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ಗಳು ಸೋರಿಕೆಯಾಗಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. 
ಕಾಲ್​ ರೆಕಾರ್ಡಿಂಗ್‌ಗಳಲ್ಲಿ ಆಶು ರೆಡ್ಡಿ, ಧರ್ಮೇಂದ್ರ ಅವರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವುದು ಕಂಡುಬಂದ ಬಳಿಕ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿದೆ. ಪ್ರಸ್ತುತ, ನ್ಯಾಯಾಲಯದ ಅಂಗಳದಲ್ಲಿ ನಡೆಯುತ್ತಿರುವ ವಾದ-ಪ್ರತಿವಾದಗಳ ನಡುವೆ ಆಶು ರೆಡ್ಡಿ ಸ್ಫೋಟಕ ಸಂಗತಿಯೊಂದನ್ನು ರಿವೀಲ್​ ಮಾಡಿದ್ದಾರೆ. ಇದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್​ ನೀಡಿದೆ.   
ತನ್ನ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ತೆಲಂಗಾಣ ಹೈಕೋರ್ಟ್‌ ಮೊರೆ ಹೋದ ನಟಿ, ಹಣ ಖರ್ಚು ಮಾಡುವಂತೆ ನಾನ್ಯಾರಿಗೂ ಬಲವಂತ ಅಥವಾ ಹೇಳಿಲ್ಲ ಎಂದಿದ್ದಾರೆ. ನಟಿಯ ಪರ ವಾದ ಮಂಡಿಸಿದ ವಕೀಲರು, ಯಾವುದೇ ಬಲವಂತವಿಲ್ಲದೆ, ಸ್ವತಃ ಸುಮಾರು 9.35 ಕೋಟಿ ರೂ. ಅನ್ನು ಅನಿವಾಸಿಯೇ ಖರ್ಚು ಮಾಡಿದ್ದಾರೆ. ಆಶು ಮತ್ತು ಅವರ ಕುಟುಂಬದವರ ಮನವೊಲಿಸಲು ಸ್ವಯಂಪ್ರೇರಣೆಯಿಂದ ಕೋಟಿಗಟ್ಟಲೇ ಹಣವನ್ನು ವ್ಯಯಿಸಿದ್ದಾರೆ. ಇಲ್ಲಿ ನಟಿಯಿಂದ ಯಾವುದೇ ಬಲವಂತ ಅಥವಾ ಕೋರಿಕೆಯಿಲ್ಲ ಎಂದು ಹೇಳಿದ್ದಾರೆ.
ಇಬ್ಬರ ನಡುವೆ ಯಾವುದೇ ಲಿಖಿತ ಒಪ್ಪಂದವಿಲ್ಲದಿದ್ದಾಗ, ಕೇವಲ ಹಣಕಾಸಿನ ವಹಿವಾಟುಗಳು ಕ್ರಿಮಿನಲ್ ಅಪರಾಧವಾಗುವುದಿಲ್ಲ. ದೂರುದಾರರ ತನ್ನ ವೈಯಕ್ತಿಕ ನಿರ್ಧಾರದ ಮೇಲೆ ಮಾಡಿದ ಖರ್ಚಿಗೆ ಆಶು ರೆಡ್ಡಿ ಅಥವಾ ಅವರ ಕುಟುಂಬ ಸದಸ್ಯರು ಹೊಣೆಯಲ್ಲ. ಅವರು ಮಾಡಿರುವ ವೆಚ್ಚಗಳಿಗೂ ನಟಿಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಸಿಸಿಎಸ್ ಪೊಲೀಸರು ಆಶು ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಯಾವುದೇ ಪುರಾವೆಗಳಿಲ್ಲ. ಹೀಗಾಗಿ, ಪ್ರಕರಣವನ್ನು ವಜಾಗೊಳಿಸಬೇಕು ಎಂದು ನಟಿಯ ಪರ ವಕೀಲರು ವಾದಿಸಿದ್ದಾರೆ.
ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಆಶು ರೆಡ್ಡಿ ಸಲ್ಲಿಸಿರುವ ರದ್ದುಗೊಳಿಸುವ ಅರ್ಜಿಯ ಕುರಿತು ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಹೈಕೋರ್ಟ್​ ತೆಲಂಗಾಣ ಸರ್ಕಾರಿ ಮಂಡಳಿಗೆ ಆದೇಶಿಸಿದೆ. ಮುಂದಿನ ವಿಚಾರಣೆಯಲ್ಲಿ ಈ ವಿವಾದದ ಕುರಿತು ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ತಿಳಿಸಿದೆ. ಈ ಪ್ರಕರಣದಲ್ಲಿ ಪ್ರಮುಖ ಆದೇಶಗಳನ್ನು ಹೊರಡಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಮೇ.04ಕ್ಕೆ ಮುಂದೂಡಿದೆ. ಆ ದಿನದಂದು ಸರ್ಕಾರ ಸಲ್ಲಿಸುವ ವಿವರಗಳನ್ನು ಪರಿಶೀಲಿಸಿದ ನಂತರವೇ, ನಟಿ ವಿರುದ್ಧದ ಎಫ್‌ಐಆರ್ ಮುಂದುವರಿಯುತ್ತೋ ಅಥವಾ ವಜಾಗೊಳ್ಳುತ್ತೋ ಎಂಬುದು ಸ್ಪಷ್ಟವಾಗಲಿದೆ.

ಏನಿದು ಪ್ರಕರಣ?

ಆಶು ರೆಡ್ಡಿ ಮತ್ತು ಅವರ ಕುಟುಂಬದ ವಿರುದ್ಧ ಸುಮಾರು 9.35 ಕೋಟಿ ರೂಪಾಯಿ ವಂಚನೆ ಮತ್ತು ಹನಿ ಟ್ರ್ಯಾಪ್ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ದೂರುದಾರ ಯೇನುಮುಲ ಸತ್ಯನಾರಾಯಣ ಮೂರ್ತಿ ಅವರ ಪ್ರಕಾರ, ಮದುವೆಯ ಆಮಿಷವೊಡ್ಡಿದ ಆಶು ರೆಡ್ಡಿ, ಕಳೆದ ಐದು ವರ್ಷಗಳಲ್ಲಿ ತಮ್ಮ ಮಗನಿಂದ 5 ಕೆಜಿ ಚಿನ್ನ, ಐಷಾರಾಮಿ ಕಾರುಗಳು ಮತ್ತು ಮಣಿಕೊಂಡದಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಸೇರಿದಂತೆ ಭಾರಿ ಮೊತ್ತದ ಹಣವನ್ನು ಪಡೆದಿದ್ದಾರೆ. ಆಶು ರೆಡ್ಡಿ ಕುಟುಂಬದವರು ಧರ್ಮೇಂದ್ರನನ್ನು "ಅಳಿಯ" ಎಂದು ಸಂಬೋಧಿಸಿ ಆರ್ಥಿಕ ಸಹಾಯ ಪಡೆಯುತ್ತಿದ್ದರು ಆದರೆ, 2025ರಲ್ಲಿ ಮದುವೆಯಾಗಲು ನಿರಾಕರಿಸಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 
ಈ ವಂಚನೆಯಲ್ಲಿ ಆಶು ರೆಡ್ಡಿ ಅವರ ತಂದೆ, ಸಹೋದರಿ ಮತ್ತು ಆಕೆಯ ಪ್ರಿಯತಮ ಎನ್ನಲಾದ ನಮ್ಮಿ ಶಿವ ಜಯಂತ್ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆಯ ಸುಳ್ಳು ಭರವಸೆ ನೀಡಿ ಹಣದ ಆಸೆ ತೋರಿಸುವುದು, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂತ್ರಸ್ತ ಯುವಕ ಈ ಘಟನೆಯಿಂದ ತೀವ್ರ ಹಣಕಾಸಿನ ನಷ್ಟ ಮತ್ತು ಮಾನಸಿಕ ಸಂಕಟಕ್ಕೆ ಒಳಗಾಗಿದ್ದು, ವಂಚನೆಯಿಂದ ಪಡೆದ ಆಸ್ತಿಗಳನ್ನು ಮರುಪಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ವಿನಂತಿಸಿದ್ದಾರೆ,(ಏಜೆನ್ಸೀಸ್​).