ಸಿನಿವಾಣಿ

ಹುಟ್ಟುಹಬ್ಬಕ್ಕೆ ಗಿಡ ನೆಡಲು ಆಶಿಕಾ ಮನವಿ

ಬೆಂಗಳೂರು: ಕಳೆದ ಕೆಲವು ದಿನಗಳಲ್ಲಿ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರು ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಮನೆಯ ಹತ್ತಿರ ಹಾರ-ಕೇಕ್ ತರಬೇಡಿ, ಇದ್ದಲ್ಲೇ ಆಶೀರ್ವಾದ ಮಾಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈಗ ಆ ಸಾಲಿಗೆ ಆಶಿಕಾ ರಂಗನಾಥ್ ಸಹ ಸೇರಿಕೊಂಡಿದ್ದಾರೆ. ಇಂದು (ಆ. 05) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಆಶಿಕಾ, ಅಭಿಮಾನಿಗಳಿಗೆ ಮನೆಯ ಹತ್ತಿರ ಬರಬೇಡಿ ಎಂದು ಕರೆ ನೀಡಿದ್ದಾರೆ.

ಸುಮ್ಮನೆ ಇಂತಹ ಸಂದರ್ಭದಲ್ಲಿ ರಿಸ್ಕ್ ತೆಗೆದುಕೊಳ್ಳುವ ಬದಲು, ಇದ್ದಲ್ಲೇ ಹಾರೈಸಿ ಎಂದಿದ್ದಾರೆ. ಈ ಕುರಿತು ಮಂಗಳವಾರವೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿರುವ ಅವರು, ‘ನನ್ನ ಹುಟ್ಟುಹಬ್ಬಕ್ಕೆ ಮನೆಯ ಹತ್ತಿರ ಬಂದು ವಿಶ್ ಮಾಡುವುದಕ್ಕೆ ಬಹಳಷ್ಟು ಜನ ಆಸೆಪಟ್ಟಿದ್ದಾರೆ. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ ಅನವಶ್ಯಕ ರಿಸ್ಕ್ ತೆಗೆದುಕೊಳ್ಳಬೇಡಿ. ಮೇಲಾಗಿ, ನಾನು ಸಹ ಮನೆಯಲ್ಲಿರುವುದಿಲ್ಲ. ಮನೆಯ ಹತ್ತಿರ ಬರುವ ಬದಲು, ಎಲ್ಲರೂ ಒಂದೊಂದು ಗಿಡ ನೆಟ್ಟರೆ, ಅದೇ ನೀವು ನನಗೆ ಕೊಡುವ ಅತ್ಯಮೂಲ್ಯ ಉಡುಗೊರೆ ಎಂದು ಭಾವಿಸುತ್ತೇನೆ’ ಎಂದು ಆಶಿಕಾ ಟ್ವೀಟ್ ಮಾಡಿದ್ದಾರೆ.

ಶರಣ್ ಅಭಿನಯದ ‘ಅವತಾರ ಪುರುಷ’, ಇಶಾನ್ ಅಭಿನಯದ ‘ರೆಮೋ’ ಮತ್ತು ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರಗಳಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದು, ಈ ಪೈಕಿ ಮೊದಲೆರೆಡು ಚಿತ್ರಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನು ‘ಮದಗಜ’ ಚಿತ್ರದಲ್ಲಿ ಆಶಿಕಾ ಅಭಿನಯದ ಭಾಗದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದ್ದು, ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ.