ಸಿನಿವಾಣಿ

ರಂಗಭೂಮಿಯ ಮೇರು ಪ್ರತಿಭೆ- ಅಮರಚೇತನ: ಬಿವಿ ಕಾರಂತ ಜನ್ಮದಿನ ಇಂದು

ಅವರು ನಟರಾಗಿದ್ದರು. ನಿರ್ದೇಶಕರಾಗಿದ್ದರು. ಗಾಯಕ, ಸಂಗೀತ ನಿರ್ದೇಶಕ, ಮೇಷ್ಟ್ರು ಎಲ್ಲವೂ ಆಗಿದ್ದರು. ಬಹುಮುಖ ಪ್ರತಿಭೆಯ ಬಿ.ವಿ. ಕಾರಂತರು (ಬಾಬುಕೋಡಿ ವೆಂಕಟರಮಣ ಕಾರಂತ) ರಂಗಭೂಮಿ ಮತ್ತು ಸಿನಿಮಾಗೆ ಹೊಸ ದಿಕ್ಕನ್ನು ತೋರಿಸಿದರು. ಹಲವು ಪ್ರತಿಭಾವಂತರನ್ನು ಹುಟ್ಟುಹಾಕಿದರು. ಬೆನಕ, ರಂಗಾಯಣದ ಮೂಲಕ ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿರುವ ಹಲವು ನಾಟಕಗಳನ್ನು ರೂಪಿಸಿದರು. ಬರೀ ಕನ್ನಡಕ್ಕೆ ಸೀಮಿತವಾಗದೆ, ಬೇರೆ ಭಾಷೆಗಳಲ್ಲೂ ರಂಗಭೂಮಿಗೆ ತಮ್ಮದೇ ರೀತಿಯಲ್ಲಿ ಕಾಯಕಲ್ಪ ನೀಡಿದರು. ಇಂದು ಅವರ ಜನ್ಮದಿನ. ಈ ಸಂದರ್ಭದಲ್ಲಿ ಅವರನ್ನು ಬಹಳ ಹತ್ತಿರದಿಂದ ನೋಡಿದ್ದ ಮತ್ತು ಅವರೊಂದಿಗೆ ಕೆಲಸ ಮಾಡಿದ್ದ ನಟ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್, ತಮ್ಮ ಗುರುಗಳನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವವನ್ನು ಈ ಲೇಖನದ ಮೂಲಕ ಹಿಡಿದಿಟ್ಟಿದ್ದಾರೆ.

ಕಾರಂತರು ಎಂದರೆ ನನಗೆ ಮೊದಲಿಗೆ ನೆನಪಾಗುವುದು ಪಂಚಭೂತಗಳು. ಗಾಳಿ, ಬೆಂಕಿ, ನೀರು ... ಇವೆಲ್ಲವೂ ನನಗೆ ಕಾರಂತರಾಗಿ ಕಾಣಿಸುತ್ತಾರೆ. ಅವರ ಸ್ವಭಾವವೇ ಹಾಗಿತ್ತು. ಆ ಸ್ವಭಾವ ಒಂದು ಮಗುವಿಗೆ ಇರುತ್ತದೆ. ಅದು ಬಹಳ ಪರಿಪೂರ್ಣವಾದ ಮತ್ತು ಪ್ಯೂರ್ ಆದಂತಹ ಒಂದು ಭಾವ. ಅದು ಬಹಳ ಕಡಿಮೆ ಜನರಲ್ಲಿರುತ್ತದೆ ಮತ್ತು ಅಂತಹವರಲ್ಲಿ ಕಾರಂತರು ಸಹ ಒಬ್ಬರು.

ಒಬ್ಬ ಮನುಷ್ಯನ ಒಳಗೆ ಅಡಗಿರುವ ಹಲವು ಸಾಧ್ಯತೆಗಳನ್ನು ಹುಡುಕುವುದಕ್ಕೆ ಇನ್ನೊಬ್ಬ ಮನುಷ್ಯ ಬೇಕು. ಅಂತಹ ಗುರು ಈಗ ಹುಡುಕಿದರೂ ಸಿಗುವುದು ಕಷ್ಟ. ನನಗೆ ಸಿಕ್ಕ ಅಂತಹ ಗುರುವೇ ಕಾರಂತರು. ಮನುಷ್ಯನಾಗಿ ಹುಟ್ಟಿದ ಮೇಲೆ ನಿನ್ನೊಳಗೆ ನೀನು ಸಾಧ್ಯತೆಗಳನ್ನೇ ಹುಡುಕುದಿದ್ದರೆ, ಅದು ಎಂತಹ ಬದುಕು ಎಂದು ತೋರಿಸಿಕೊಟ್ಟವರು ಅವರು. ನನಗೊಬ್ಬನಿಗಷ್ಟೇ ಅಲ್ಲ, ನನ್ನಂತಹ ಬಹಳಷ್ಟು ಜನರಿಗೆ ಅವರಲ್ಲಿರುವ ಬೇರೆಬೇರೆ ಸಾಧ್ಯತೆಗಳನ್ನು ತೋರಿಸಿಕೊಟ್ಟಿದ್ದಾರೆ. ಹಾಗಾಗಿಯೇ ಯಾವುದೋ ಒಂದು ಕೆಲಸಕ್ಕೆ ಮಾತ್ರ ಸೀಮಿತವಾಗದೇ, ಬೇರೆಬೇರೆ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಯಿತು. ನಟನೆಯ ಜತೆಗೆ ಕಲಾ ನಿರ್ದೇಶನ, ರಂಗ ಸಜ್ಜಿಕೆ, ಗಾಯನದಲ್ಲೂ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು.

ಅವರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬರೀ ಒಬ್ಬ ನಾಟಕದ ವ್ಯಕ್ತಿಯಾಗಿ ಮತ್ತು ಆ ಕಲೆಗೆ ಸೀಮಿತವಾಗಿ ಗಮನಿಸುತ್ತಿರಲಿಲ್ಲ. ಒಬ್ಬ ಮನುಷ್ಯನಾಗಿ ನೋಡುತ್ತಿದ್ದರು. ಇವನು ಯಾರು? ಯಾಕೆ ಹೀಗಿದ್ದಾನೆ? ಇವನೇನು ಮಾಡಬಹುದು? ಮುಂತಾದ ಹಲವು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪ್ರತಿಯೊಬ್ಬರ ಹಾವ-ಭಾವಗಳನ್ನೂ ಗಮನಿಸಿ, ಅವರಿಂದ ಇನ್ನೇನನ್ನೋ ಹೆಕ್ಕಿ ತೆಗೆಯುವುದಕ್ಕೆ ಪ್ರಯತ್ನಿಸುತ್ತಲೇ ಇದ್ದರು.

ಯಕ್ಷಗಾನದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಒಂದು ಕಡೆ ಸಿದ್ಧಿ ಮತ್ತು ಪ್ರಸಿದ್ಧಿಯ ಬಗ್ಗೆ ಹೇಳುತ್ತಾರೆ. ಸಿದ್ಧಿ ಬೇರೆ, ಪ್ರಸಿದ್ಧಿ ಬೇರೆ. ಸಿದ್ಧಿ ಪ್ರಸಿದ್ಧಿಯನ್ನು ಹುಟ್ಟಿಸುತ್ತದಂತೆ. ಪ್ರಸಿದ್ಧರನ್ನು ಹುಟ್ಟಿಸುತ್ತದಂತೆ. ಆದರೆ, ಪ್ರಸಿದ್ಧಿ ಸಿದ್ಧಿಯನ್ನು ಸುಟ್ಟು ಹಾಕುತ್ತದಂತೆ. ನನ್ನ ಪ್ರಕಾರ, ಕಾರಂತರು ಸಿದ್ಧರು. ಪ್ರಸಿದ್ಧರಾದವರೆಲ್ಲ ಸಾಧಕರಲ್ಲ. ಸಾಧಕರಾದವರೆಲ್ಲ ಪ್ರಸಿದ್ಧರಾದವರಲ್ಲ. ಕೆಲವರು ನನಗೆ ನೀವು ಅದಾಗಬಹುದಿತ್ತು, ಇದಾಗಬೇಕಿತ್ತು ಎಂದು ಹೇಳುತ್ತಿರುತ್ತಾರೆ. ಕಾರಂತರನ್ನು ನೊಡಿದಾಗ, ಬೇರೆ ತರಹದ ಸಾಧನೆ ಮಾಡಬೇಕು ಅಂತನಿಸುತ್ತದೆ. ಜನಪ್ರಿಯತೆ ಅಥವಾ ಅದಕ್ಕೆ ಮಿಗಿಲಾದ ಇನ್ನೇನೋ ಮಾಡಬೇಕು ಅಂತ ಯಾವಾಗಲೂ ಅನಿಸುತ್ತದೆ. ಆ ತರಹದ ಪ್ರಯತ್ನದ ಕಡೆಗೆ ನನ್ನಂತಹ ಎಷ್ಟೋ ಜನರನ್ನು ಎಳೆದುಕೊಂಡು ಬಂದವರು ಕಾರಂತರು. ಶೇಣಿ ಅವರು ಹೇಳಿದಂತಹ ಸಿದ್ಧಿ ಮತ್ತು ಪ್ರಸಿದ್ಧಿಯನ್ನು ನೋಡಿದಾಗ, ಪ್ರಸಿದ್ಧಿ ಎನ್ನುವುದನ್ನು ಕಾಲಿನಲ್ಲಿ ಒದ್ದು ಸಾಧಕರಾದವರು ಕಾರಂತರು. ಒಬ್ಬ ಪ್ರಸಿದ್ಧನಾದವನಿಂದ ಯಾವ ಶಿಷ್ಯನೂ ಹುಟ್ಟುವುದಿಲ್ಲ. ಬರೀ ಅಭಿಮಾನಿಗಳು ಮಾತ್ರ ಹುಟ್ಟುತ್ತಾರೆ. ಆದರೆ, ಸಾಧಕನ ಹಿಂದೆ ಒಂದು ದೊಡ್ಡ ದಂಡೇ ಇರುತ್ತದೆ. ಕಲಿಯುತ್ತಲೇ ಇರುವ ಒಂದು ದೊಡ್ಡ ಸಮುದಾಯ ಹುಟ್ಟಿಕೊಳ್ಳುತ್ತದೆ. ಪ್ರಸಿದ್ಧ ಜನರ ಕಟೌಟ್​ಗಳು ಆಗಾಗ ಬದಲಾಗುತ್ತಿರುತ್ತದೆ. ಆದರೆ, ಸಾಧಕರ ಕಟೌಟ್​ಗಳು ಹೃದಯದಲ್ಲಿ ಶಾಶ್ವತವಾಗಿ ಇರುತ್ತವೆ.

ಕಾರಂತರು ಯಾವತ್ತೂ ಒಂದು ಮಾತು ಹೇಳುತ್ತಿದ್ದರು. ‘ನಾನು ನಿಮಗೆ ಕೊಡುತ್ತೇನೆ. ನೀವು ಇನ್ನೊಬ್ಬರಿಗೆ ಕೊಡಿ. ನಾನು ಕೊಟ್ಟಿದ್ದನ್ನು ಇನ್ನಷ್ಟು ಇಂಪ್ರೂವ್ ಮಾಡಿ ಮುಂದಿನವರಿಗೆ ತಲುಪಿಸಿ. ನೀವೇನು ಕೊಡುತ್ತೀರಾ ಎನ್ನುವುದಷ್ಟೇ ಮುಖ್ಯ. ನಾನು ಹಳ್ಳಿಯಲ್ಲಿ ಇದ್ದಾಗ ಯಾರೋ ಹಾಡಿದ ಹಾಡುಗಳನ್ನು ಕೇಳಿ, ಅದು ನನ್ನಿಂದ ಇನ್ನೊಂದಾಯಿತು. ಅದು ನಿಮ್ಮಿಂದ ಮತ್ತೊಂದಾಗಬೇಕು’ ಎನ್ನುತ್ತಿದ್ದರು. ಕಾರಂತರು ಹರಿಯುವ ನದಿ ತರಹ ಇದ್ದರು. ಹರಿಯುವ ನದಿಯ ಪಕ್ಕದಲ್ಲಿ ಅಡ್ಡ ಮರ ಇದ್ದರೆ, ಅದಕ್ಕೆ ಜೀವ ಕೊಟ್ಟು ಮುಂದಕ್ಕೆ ಹೋಗುತ್ತದೆ. ಇನ್ಯಾವುದೋ ಹುಲ್ಲು ಒಣಗಿದರೆ, ಅದಕ್ಕೂ ಜೀವ ಕೊಡುತ್ತದೆ. ಹಾಗೆಯೇ ಕಾರಂತರೂ ನಮಗೆಲ್ಲ ಜೀವ ಕೊಟ್ಟು ಹೋದರು.

ಇನ್ನು, ಕಾರಂತರ ಸಂಗೀತದ ಸೆನ್ಸ್ ಅದ್ಭುತವಾಗಿತ್ತು. ಅವರಿಗೆ ಶಬ್ದ ಮತ್ತು ನಿಶ್ಯಬ್ದದ ನಡುವಿನ ಅಂತರ ಚೆನ್ನಾಗಿ ಗೊತ್ತಿತ್ತು. ತಂತಿ ಮೀಟಿದಾಗ ಹೇಗೆ ಒಂದು ಶಬ್ದ ಮೂಡುತ್ತದೋ, ಅದೇ ರೀತಿ ಕಾರಂತರು ತಮ್ಮನ್ನು ತಾವು ನುಡಿಸಿ, ತಮಗೆ ಬೇಕಾದ ಸೌಂಡುಗಳನ್ನೆಲ್ಲ ತೆಗೆದುಕೊಳ್ಳುತ್ತಿದ್ದರು. ಅವರ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ರೀಸರ್ಚ್ ಮಾಡುವ ಅವಶ್ಯಕತೆ ಇದೆ. ಇವತ್ತಿನ ಕೆಲವು ಸಂಗೀತ ಅಥವಾ ಸೌಂಡುಗಳನ್ನು ಕೇಳಿದಾಗ, ಕಾರಂತರು ಆಗಲೇ ಆ ತರಹದ ಯೋಚನೆ ಮಾಡಿದ್ದರು. ಕೆಲವೊಂದು ಈಗ ತಂತ್ರಜ್ಞಾನದ ಮೂಲಕ ಬರುತ್ತಿವೆ. ಆದರೆ, ಕಾರಂತರು ಅದನ್ನು ಯೋಚಿಸಿದ್ದರು. ನಾವೆಲ್ಲರೂ ಈಗ influence ಜಗತ್ತಿನಲ್ಲಿ ಇದ್ದರೆ, ಕಾರಂತರು inspiring ಜಗತ್ತಿನಲ್ಲಿ ಬದುಕುತ್ತಿದ್ದರು. ಹಾಗಾಗಿ, ಅವರು ಪ್ರತಿ ಸಲ ಹೊಸದಾಗಿ ಕಾಣಿಸುತ್ತಾರೆ. ಅವರ ಎಲ್ಲ ಕೆಲಸಗಳು 10 ವರ್ಷಗಳ ಮುಂದೆ ಇದೆ ಎನ್ನುವಂತೆ ಕಾಣಿಸುತ್ತದೆ.

ರಂಗಭೂಮಿಗೆ ನೆರಳಾಗಿ ನಿಂತಂತಹ ಬಹುಮುಖ ಪ್ರತಿಭೆ ಕಾರಂತರು. ಎಲ್ಲರ ನಡುವೆ ಇನ್ನೂ ಬದುಕುತ್ತಾ, ನಮ್ಮನ್ನು ಯಾರಾದರೂ ನೆನಪಿಸಿಕೊಂಡರೆ, ಅದರೊಳಗೂ ಬದುಕುತ್ತಾ ಸಾಧಕರಾಗಿದ್ದಾರೆ.

(ಲೇಖಕರು ನಟ- ನಿರ್ದೇಶಕ)