ಸಿನಿವಾಣಿ

ಏಳು ದಿನಗಳಲ್ಲಿ ಅನುರಾಗ್ ಬಂಧನವಾಗದಿದ್ದರೆ ಪ್ರತಿಭಟನೆ ... ಅಠಾವಳೆ ಎಚ್ಚರಿಕೆ

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ವಿರುದ್ಧ ವಿರುದ್ಧ ಸೂಕ್ತ ಆ್ಯಕ್ಷನ್​ ತೆಗೆದುಕೊಳ್ಳಿದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವ ನಟಿ ಪಾಯಲ್​ ಘೋಶ್​ ಸೋಮವಾರವಷ್ಟೇ ಬೆದರಿಕೆ ಹಾಕಿದ್ದರು.

ಈಗ ಅವರ ಬೆನ್ನಿಗೆ ನಿಂತಿರುವ ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಸಹ ಅನುರಾಗ್​ ಕಶ್ಯಪ್​ ಅವರನ್ನು ಏಳು ದಿನಗಳೊಳಗಾಗಿ ಬಂಧಿಸುವುದಕ್ಕೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂಬೈನಲ್ಲಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್​​ ಆಕ್ಟ್​ನಡಿ ಅನುರಾಗ್​ ಕಶ್ಯಪ್​ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್​ ಅವರನ್ನು ಕರೆದು ವಿಚಾರಣೆ ಮಾಡಿಲ್ಲ.

ಈ ಕುರಿತು ಮಾತನಾಡಿದ್ದ ಪಾಯಲ್​, ಅನುರಾಗ್​ ವಿರುದ್ಧ ದೂರು ಕೊಟ್ಟು ಒಂದು ವಾರವಾದರೂ ಅವರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಅನುರಾಗ್​ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಸಹ ಮಾಡುವುದಾಗಿ ಹೇಳಿದ್ದರು. ಈ ಸಂಬಂಧ, ಅವರು ಮುಂಬೈನಲ್ಲಿ ಇಂದು ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಅವರನ್ನು ಭೇಟಿ ಮಾಡಿ, ತಮ್ಮ ಮೇಲಾಗಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವರು, ಪಾಯಲ್​ಗೆ ತಮ್ಮ ಸಂಪೂರ್ಣ ಸಹಾಯಹಸ್ತವನ್ನು ಚಾಚಿದ್ದಾರೆ. ಅಷ್ಟೇ ಅಲ್ಲ, ಮುಂಬೈಗೆ ಏಳು ದಿನಗಳ ಗಡುವು ನೀಡಿರುವ ಅವರು, ಏಳು ದಿನಗಳೊಳಗಾಗಿ ಅನುರಾಗ್​ ಕಶ್ಯಪ್​ ಅವರನ್ನು ಬಂಧಿಸದಿದ್ದರೆ, ಮುಂಬೈನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

ಇದುವರೆಗೂ ಅನುರಾಗ್​ ಅವರಿಂದ ದೂರವೇ ಉಳಿದಿದ್ದ ಮುಂಬೈ ಪೊಲೀಸರು, ಈಗಲಾದರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ ಮತ್ತು ಅನುರಾಗ್​ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.