ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಪ್ರೇಮಬರಹ' ಚಿತ್ರ ಬಿಡುಗಡೆಯಾಗಿ ಆರು ವರ್ಷಗಳ ಬಳಿಕ ನಟ ಅರ್ಜುನ್ ಸರ್ಜಾ ಆ್ಯಕ್ಷನ್&ಕಟ್ ಹೇಳುತ್ತಿರುವ ಹೊಸ ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ "ಸೀತಾ ಪಯಣ' ಎಂದು ನಾಮಕರಣ ಮಾಡಲಾಗಿದೆ. "ಸೆಕೆಂಡ್ ಹ್ಾ', "ನಮ್ಮ ಹುಡುಗರು' ಚಿತ್ರಗಳಲ್ಲಿ ನಟಿಸಿರುವ ನಟ, ನಿರ್ದೇಶಕ ಉಪೇಂದ್ರ ಅಣ್ಣ ಸುಧೀಂದ್ರ ಪುತ್ರ ನಿರಂಜನ್ ಈ ಸಿನಿಮಾ ನಾಯಕನಾಗಿದ್ದು, ಅವರಿಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಜೋಡಿಯಾಗಿದ್ದಾರೆ. "ಸೀತಾ ಪಯಣ'ದ ಬಗ್ಗೆ ನಾಯಕ ನಿರಂಜನ್, "ಇದೊಂದು ಸೈಕಲಾಜಿಕಲ್ ಕಮರ್ಷಿಯಲ್ ಆ್ಯಕ್ಷನ್, ಲವ್ ಜತೆಗೆ ಹಲವು ಮೌಲ್ಯಭರಿತ ಅಂಶಗಳಿರುವ ಸಿನಿಮಾ. ಈಗಾಗಲೇ ಶೂಟಿಂಗ್, ಡಬ್ಬಿಂಗ್ ಪೂರ್ಣಗೊಂಡಿದೆ. ಕನ್ನಡ ಮತ್ತು ತೆಲುಗು, ತಮಿಳು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ನಾನಿಲ್ಲಿ ಪ್ರೇಕ್ಷಕರು ಎಂಜಾಯ್ ಮಾಡುವಂತಹ, ಎರಡು ವಿಭಿನ್ನ ಶೇಡ್ಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾನು ನಟಿಸುತ್ತಿರುವ ಮೊದಲ ಬಹುಭಾಷಾ ಚಿತ್ರವಿದು' ಎಂದು ಸಂತಸ ಹಂಚಿಕೊಳ್ಳುತ್ತಾರೆ.
ಅರ್ಜುನ್ ಗರಡಿಯಲ್ಲಿ ಪಳಗಿದ ನಿರಂಜನ್
160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ 12 ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದು, ನಿರ್ಮಾಣ, ಕಥೆ, ವಿತರಣೆ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. "ಸೀತಾ ಪಯಣ' ಚಿತ್ರವನ್ನು ಅವರೇ ನಿರ್ದೇಶಿಸಿ, ನಿರ್ಮಿಸುತ್ತಿದ್ದು, "ಅವರಿಂದ ನಟನಾಗಿ ತುಂಬ ಕಲಿತೆ. ನ್ಯಾಚುರಲ್ ಆಗಿ ಅನುಭವಿಸಿ ನಟಿಸುವುದನ್ನು ಹೇಳಿಕೊಟ್ಟರು. ಒಬ್ಬ ಪರ್ಫಾರ್ಮರ್ ಆಗಿ ನನ್ನನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದ್ದಾರೆ' ಎಂದು ಹೇಳಿಕೊಳ್ಳುತ್ತಾರೆ.
ಚಿಕ್ಕಪ್ಪನ ಚಿತ್ರದಲ್ಲಿ ನಟಿಸುವಾಸೆ
ಉಪೇಂದ್ರ ಅವರ ನಿರ್ದೇಶನದಲ್ಲಿ ನಟಿಸುವಾಸೆ ವ್ಯಕ್ತಪಡಿಸುವ ನಿರಂಜನ್, "ಮನೆಯಲ್ಲಿ ಕುಟುಂಬದ ಸದಸ್ಯರಾಗಿ "ಯುಐ' ಕಥೆಯ ಸಮಯದಲ್ಲೂ ಚಿಕ್ಕಪ್ಪ ಜತೆ ಚರ್ಚಿಸುತ್ತಿದ್ದೆ. ಅವರ ನಿರ್ದೇಶನದಲ್ಲಿಯೇ ನಟಿಸಬೇಕು ಅಂತಾಸೆ ಇದೆ. ಅದಕ್ಕೂ ಮುನ್ನ ನಾನು ನಟನಾಗಿ, ನಾಯಕನಾಗಿ ಗುರುತಿಸಿಕೊಳ್ಳಬೇಕು. ನಾನು ಮಾಡಬಲ್ಲೆ ಅಂತ ನನಗೆ ಮತ್ತು ಅವರಿಗೆ ಅನ್ನಿಸಿದಾಗ ಇಬ್ಬರೂ ಸೇರಿ ಸಿನಿಮಾ ಮಾಡುತ್ತೇವೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ನಿರಂಜನ್.
ತಡವಾಗಿದೆ ನಿಜ…
2022ರಲ್ಲಿ "ನಮ್ಮ ಹುಡುಗರು' ಮೂಲಕ ನಾಯಕನಾದ ನಿರಂಜನ್, ಆ ಬಳಿಕ "ಸೂಪರ್ಸ್ಟಾರ್', "ಹಂಟರ್', "ಕ್ಯೂ' ಚಿತ್ರಗಳಲ್ಲಿ ನಟಿಸಿದ್ದಾರೆ. ""ಹಂಟರ್' ರಿಲೀಸ್ಗೆ ರೆಡಿಯಿದ್ದು, ಬಹುಶ@ ಜನವರಿಯಲ್ಲಿ ತೆರೆಗೆ ಬರಬಹುದು. ಆದರೆ, ಉತ್ತಮ ತಂಡಗಳು ಸಿಗದ ಕಾರಣ ಕೆಲ ಚಿತ್ರಗಳು ತಡವಾಗಿವೆ. ನಾನು ಮೂರು, ನಾಲ್ಕು ವರ್ಷ ನನ್ನ ಜೀವನವನ್ನು ಅವರಿಗೆ ಕೊಟ್ಟೆ. ಆದರೆ, ಕಾರಣಾಂತರಗಳಿಂದ ಕೆಲ ಚಿತ್ರಗಳು ಸ್ಥಗಿತಗೊಂಡವು. ಒಳ್ಳೆ ಪಾಠಗಳನ್ನು ಕಲಿತೆ' ಎನ್ನುತ್ತಾರೆ.