ಸಿಧು ಮೂಸೆವಾಲಾ (Sidhu Moose Wala) 
ಸಿನಿವಾಣಿ

ಕೊಲೆಗಾರರಿಗೆ ಇಲ್ಲಿ ಹೀರೋ ಪಟ್ಟವೇ? 'ಲಾರೆನ್ಸ್ ಆಫ್ ಪಂಜಾಬ್' ವಿರುದ್ಧ ಸಿಧು ಮೂಸೆವಾಲಾ ತಂದೆ ಆಕ್ರೋಶ! Sidhu Moose Wala

ಚಂಢೀಗಡ್​: ಪಂಜಾಬ್‌ನ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಗಾಯ ಇನ್ನೂ ಹಸಿಯಾಗಿರುವಾಗಲೇ, ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಜೀವನ ಆಧರಿಸಿದ ಎನ್ನಲಾದ 'ಲಾರೆನ್ಸ್ ಆಫ್ ಪಂಜಾಬ್' ವೆಬ್ ಸರಣಿಯ ವಿರುದ್ಧ ಸಿಧು ಅವರ ತಂದೆ ಬಲ್ಕೌರ್ ಸಿಂಗ್ ಮತ್ತು ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರೋಡೆಕೋರರು ಯುವಕರಿಗೆ ಮಾದರಿಯೇ?

ತಮ್ಮ ಮಗನನ್ನು ಕಳೆದುಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿರುವ ಬಲ್ಕೌರ್ ಸಿಂಗ್ ಈ ವೆಬ್​ ಸರಣಿಯನ್ನು ತಕ್ಷಣ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಪರಾಧ ಚಟುವಟಿಕೆಗಳನ್ನು ಮಾಡುವುದನ್ನು ಬಿಟ್ಟು ಈ ದರೋಡೆಕೋರ ದೇಶಕ್ಕಾಗಿ ಅಥವಾ ಸಮಾಜಕ್ಕಾಗಿ ಮಾಡಿದ್ದಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಇಂತಹ ಕ್ರಿಮಿನಲ್‌ಗಳನ್ನು ಹೀರೋಗಳಂತೆ ಪರದೆಯ ಮೇಲೆ ತೋರಿಸುವುದು ಪಂಜಾಬ್‌ನ ದಾರಿ ತಪ್ಪಿದ ಯುವಕರಿಗೆ ತಪ್ಪು ಸಂದೇಶ ನೀಡುತ್ತದೆ. ನಮ್ಮ ರಾಜ್ಯದಲ್ಲಿ ಎಷ್ಟೋ ಜನ ವಿಜ್ಞಾನಿಗಳು, ಕ್ರೀಡಾಪಟುಗಳು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರಿದ್ದಾರೆ. ಅವರ ಬಗ್ಗೆ ಸಿನಿಮಾ ಮಾಡಿ, ಯುವಕರಿಗೆ ಪ್ರೇರಣೆ ನೀಡಿ. ಅದನ್ನು ಬಿಟ್ಟು ಕೊಲೆಗಾರರನ್ನು ವೈಭವೀಕರಿಸುವುದು ಎಷ್ಟು ಸರಿ? ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಕೀಯ ಸಂಘರ್ಷ ಮತ್ತು ಐಟಿ ನಿಯಮಗಳ ಉಲ್ಲಂಘನೆ
ಕೇವಲ ಕುಟುಂಬ ಮಾತ್ರವಲ್ಲದೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಈ ಬಗ್ಗೆ ZEE5 ಸಂಸ್ಥೆಗೆ ಖಡಕ್ ಪತ್ರ ಬರೆದಿದ್ದಾರೆ. ಏಪ್ರಿಲ್ 27 ರಂದು ಬಿಡುಗಡೆಯಾಗಲಿರುವ ಈ ಸರಣಿಯು ಐಟಿ ನಿಯಮಗಳು 2021 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಮೇಲೆ ಈಗಾಗಲೇ ಅನೇಕ ಗಂಭೀರ ಕ್ರಿಮಿನಲ್ ಪ್ರಕರಣಗಳಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವಾಗ ಆತನನ್ನು ವೈಭವೀಕರಿಸುವುದು ಕಾನೂನುಬಾಹಿರ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತೆ ಎಂದು ಅವರು ಎಚ್ಚರಿಸಿದ್ದಾರೆ.

ನ್ಯಾಯ ಸಿಗದ ನೋವಿನಲ್ಲಿ ಕುಟುಂಬ

ಸಿಧು ಮೂಸ್ ವಾಲಾ ಕುಟುಂಬದ ನೋವು ಇನ್ನೂ ಕಡಿಮೆಯಾಗಿಲ್ಲ. ನನ್ನ ಮಗನ ಕೊಲೆಗಾರರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ, ಅಲ್ಲಿಂದಲೇ ಅವರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇಂತಹ ಸಮಯದಲ್ಲಿ ಈ ಸರಣಿ ಬಿಡುಗಡೆ ಮಾಡುವುದು ನಮಗೆ ಮಾಡುತ್ತಿರುವ ಅವಮಾನ ಎಂದು ಬಲ್ಕೌರ್ ಸಿಂಗ್ ನೋವು ತೋಡಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಒಟಿಟಿ ಸಂಸ್ಥೆ ಈ ಸರಣಿಯನ್ನು ತಡೆಹಿಡಿಯದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಪಿಐಎಲ್ (PIL) ದಾಖಲಿಸುವುದಾಗಿ ತಂಡ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್​).