ಸಿನಿವಾಣಿ

ನಟನೆ ವಿಷಯದಲ್ಲಿ ನನಗೆ ದುರಾಸೆ

theerthaswamy

|ಹರ್ಷವರ್ಧನ್ ಬ್ಯಾಡನೂರು

‘ಕೆಜಿಎಫ್’ ಚಿತ್ರ ಹಲವರ ಬದುಕು ಬದಲಿಸಿದೆ. ಅವರಲ್ಲಿ ಅರ್ಚನಾ ಜೋಯಿಸ್ ಸಹ ಒಬ್ಬರು. ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಇದೀಗ ‘ಕೆಜಿಎಫ್ ಅಮ್ಮ’ ಎಂದೇ ಜನಪ್ರಿಯರು. ಅಮ್ಮನ ಪಾತ್ರ ಎಂದಾಗ ಅರ್ಚನಾ ನಟಿಸುವುದಕ್ಕೆ ಒಪ್ಪಿರಲಿಲ್ಲವಂತೆ. ‘‘ಕೆಜಿಎಫ್’ ನನ್ನ ವೃತ್ತಿಜೀವನಕ್ಕೆ ವೇಗ ನೀಡಿದೆ. ಮೊದಲು ಅವಕಾಶ ಬಂದಾಗ ನನಗೆ ನಟಿಸಲು ಇಷ್ಟವಿರಲಿಲ್ಲ. ನಾಯಕಿಯಾಗಿ ನಟಿಸಬೇಕು ಅಂತಿಲ್ಲದಿದ್ದರೂ, ಅಮ್ಮನ ಪಾತ್ರ ಯಾಕೆ ಮಾಡಬೇಕು ಅಂತಿದ್ದೆ. ನಿರ್ಮಾಣ ಸಂಸ್ಥೆ, ಚಿತ್ರತಂಡದ ಬಗ್ಗೆ ಫ್ರೆಂಡ್ಸ್ ಹೇಳಿದರು. ಆಗ ಅರ್ಧ ಮನಸ್ಸಿನಲ್ಲೇ ಒಪ್ಪಿಕೊಂಡೆ’ ಎನ್ನುತ್ತಾರೆ ಅರ್ಚನಾ. ಸಣ್ಣ ವಯಸ್ಸಿನಲ್ಲಿ ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಷ್ಟವಾಗಲಿಲ್ಲವಾ? ಎಂದರೆ, ಈ ನಿಟ್ಟಿನಲ್ಲಿ ನೃತ್ಯ ಸಹಕಾರಿಯಾಯಿತು ಎಂಬ ಉತ್ತರ ಬರುತ್ತದೆ. ‘ದುರಹಂಕಾರದ ಮಾತಲ್ಲ, ಆದರೆ ಎರಡು ಚಿತ್ರಗಳಲ್ಲೂ ಚಾಲೆಂಜಿಂಗ್ ಅನ್ನಿಸಲಿಲ್ಲ. ‘ಕೆಜಿಎಫ್ 1’ನಲ್ಲಿ ಆಕೆ ನರಳುವುದನ್ನು ತೋರಿಸಲಾಗುತ್ತದೆ. ಅದೇ ‘ಕೆಜಿಎಫ್ 2’ನಲ್ಲಿ ಆಕೆಯನ್ನು ಒಬ್ಬ ಯೋಧಳನ್ನಾಗಿ ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ‘ಕೆಜಿಎಫ್ 2’ ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು’ ಎಂದು ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

ಅಮ್ಮನ ಪಾತ್ರಕ್ಕೇ ಬೇಡಿಕೆ

‘ಕೆಜಿಎಫ್’ ಬಳಿಕ ಅರ್ಚನಾಗೆ ತಾಯಿ ಪಾತ್ರದಲ್ಲಿ ನಟಿಸಲು ಹೆಚ್ಚು ಆಫರ್​ಗಳು ಬರುತ್ತಿವೆಯಂತೆ. ‘ದೊಡ್ಡದೊಡ್ಡ ನಿರ್ಮಾಣ ಸಂಸ್ಥೆಗಳಿಂದಲೂ 40-50 ವರ್ಷದ ಹೀರೋಗಳಿಗೆ ಅಮ್ಮನ ಪಾತ್ರಕ್ಕೆ ಕರೆಯುತ್ತಾರೆ. ಹೊಸ ಬಗೆಯ ಪಾತ್ರಗಳಲ್ಲಿ ನಟಿಸುವ ತುಡಿತವಿದೆ. ಅರ್ಚನಾ ಅಂದರೆ ಜನ ಅಸಹ್ಯ ಪಡಬೇಕು ಅಥವಾ ಹೆದರಬೇಕು. ಆ ತರಹ ನಟಿಸಬೇಕು. ಡ್ಯಾನ್ಸರ್ ಆಗಿ, ಕ್ರೀಡಾಪಟುವಾಗಿ, ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ, ಹುಚ್ಚಿಯಾಗಿ, ಬುದ್ಧಿಮಾಂದ್ಯೆಯಾಗಿ ನಟಿಸುವಾಸೆ. ನಟನೆ ವಿಷಯದಲ್ಲಿ ನನಗೆ ದುರಾಸೆ’ ಎನ್ನುತ್ತಾರೆ.

ಎಲ್ಲರ ನೆನಪಲ್ಲುಳಿಯುವಂತೆ ನಾನು ನಟಿಸಬೇಕು

ಬಾಲ್ಯದಿಂದ ಇದುವರೆಗಿನ ಪಯಣವನ್ನು ನೆನಪಿಸಿಕೊಳ್ಳುವ ಅರ್ಚನಾ, ‘ನಾನು ಹುಟ್ಟಿದ್ದು ಕೋಲಾರ. ಬೆಳೆದಿದ್ದು ಬೆಂಗಳೂರು, ಆಂಧ್ರ ಮತ್ತು ತಮಿಳುನಾಡಿನಲ್ಲಿ. ಭರತನಾಟ್ಯದಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ‘ಕೆಜಿಎಫ್ ಅಮ್ಮ’ ಅಂತ ಹೇಗೆ ಜನ ನೆನಪಿಟ್ಟುಕೊಂಡಿದ್ದಾರೋ, ಹಾಗೇ ಹುಚ್ಚಿ ಅಂತಲೋ ಅಥವಾ ಬೇರೆ ಯಾವುದೋ ಪಾತ್ರದಿಂದಲೋ ನೆನಪಿಟ್ಟುಕೊಳ್ಳಬೇಕು. ಸಂಗೀತ ಮತ್ತು ಸಂಸ್ಕೃತ ಕಲಿಕೆ ಮುಂದುವರಿಸಿದ್ದೇನೆ. ನಾಯಕ ರಿಗೆ ಹೋಲಿಸಿದರೆ, ನಾಯಕಿಯರಿಗೆ ಶೆಲ್ಪ್ ಲೈಫ್ ಕಡಿಮೆ. ಈ ಬಗ್ಗೆ ನನಗೆ ಬೇಸರವಿದೆ. ಆದರೆ, ಈಗ ಅದು ಸಣ್ಣಮಟ್ಟದಲ್ಲಿ ಬದಲಾಗುತ್ತಿದೆ. ಪತಿ ಶ್ರೇಯಸ್, ಅಪ್ಪ-ಅಮ್ಮ ಕುಟುಂಬದ ಎಲ್ಲರ ಸಪೋರ್ಟ್ ಇರುವುದರಿಂದಲೇ ನಾನು ಇಷ್ಟು ದೂರ ಬರಲು ಸಾಧ್ಯವಾಗಿದೆ’ ಎಂದು ಮಾತು ಪೂರ್ಣಗೊಳಿಸುತ್ತಾರೆ.

3 ಚಿತ್ರಗಳು ರಿಲೀಸ್​ಗೆ ರೆಡಿ

ಇಂತಹ ಅರ್ಚನಾ ನಟಿಸಿರುವ ಮೂರು ಚಿತ್ರಗಳು ಸದ್ಯ ತೆರೆಗೆ ಬರಲು ರೆಡಿ ಇವೆಯಂತೆ. ‘ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಪಲ್ಲವಿ ಎಂಬ ಬದುಕು ಬಂದಂತೆ ಸ್ವೀಕರಿಸುವ ಯುವತಿಯ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರ ಚಿಕ್ಕದಾದರೂ ತೂಕವಿದೆ. ಹಾಗೆಯೇ ‘ಹ್ಯಾಶ್​ಟ್ಯಾಗ್ ಮ್ಯೂಟ್’ ಎಂಬ ಮಹಿಳಾಪ್ರಧಾನ ಸೈಕಲಾಜಿಕಲ್ ಥ್ರಿಲ್ಲರ್​ನಲ್ಲಿ ನಟಿಸಿದ್ದೇನೆ. ‘ಕ್ಷೇತ್ರಪತಿ’ ಎಂಬ ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ರಾಕಿಂಗ್ ಸ್ಟಾರ್ ಯಶ್ ಹೊಗಳಿಕೆ, ನೀಲ್ ಪ್ರಶಾಂತತೆ!

‘ಕೆಜಿಎಫ್ 2’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಯಶ್, ಅರ್ಚನಾ ಅವರನ್ನು ಹೊಗಳಿದ್ದರು. ಅದರ ಬಗ್ಗೆ ಮಾತನಾಡುವ ಅವರು, ‘ಅದೊಂದು ಭಾವನಾತ್ಮಕ ಘಟನೆ’ ಎನ್ನುವುದರ ಜತೆಗೆ ಯಶ್​ಗೆ ಧನ್ಯವಾದ ಹೇಳುತ್ತಾರೆ. ಇನ್ನು, ನಿರ್ದೇಶಕ ಪ್ರಶಾಂತ್ ನೀಲ್ ಅವರ ಜತೆ ಕೆಲಸ ಮಾಡಿದ ಅನುಭವ ಹಂಚಿಕೊಳ್ಳುವ ಅರ್ಚನಾ, ‘ಪ್ರಶಾಂತ್ ನೀಲ್ ಬಹಳ ಚೆನ್ನಾಗಿ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದರು. ಕಲಾವಿದರಿಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ, ಕಲಾವಿದರು ಬೆಳಗ್ಗೆ ಎದ್ದು ಚೆನ್ನಾಗಿ ನಟಿಸಬಹುದು ಎನ್ನುತ್ತಿದ್ದರು. ಒಮ್ಮೆ ಉತ್ತರ ಕರ್ನಾಟಕಕ್ಕೆ ಹೋಗಿದ್ದಾಗ ಒಂದು ಹೋಟೆಲ್ ರೂಮ್ ಕೊಟ್ಟಿದ್ದರು. ಅದು ಇಷ್ಟವಾಗಲಿಲ್ಲ. ತಕ್ಷಣ ಅವರು ನಮ್ಮನ್ನು ಅವರ ರೂಮ್ಲ್ಲಿ ಬಿಟ್ಟು, ಅವರು ಎಲ್ಲಿ ಮಲಗಿದರೋ ಗೊತ್ತಿಲ್ಲ’ ಎನ್ನುತ್ತಾರೆ.