ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನ ಬಳಿಕ ನಟ ಗಣೇಶ್ "ಪಿನಾಕ', "ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎರಡು ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಸದ್ಯ ಚಿತ್ರೀಕರಣ ಭರದಿಂದ ಸಾಗಿದೆ. ಅದರ ನಡುವೆಯೇ ಗಣೇಶ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದು, ಮುಂದಿನ ಏ.6ರಂದು ಸಿನಿಮಾ ಮುಹೂರ್ತ ನೆರವೇರಲಿದೆ. ಈ ಚಿತ್ರಕ್ಕೆ ಕಥೆಗಾರ, ಸಂಭಾಷಣೆಕಾರ, ಚಿತ್ರಸಾಹಿತಿ, ನಿರ್ದೇಶಕ ಅರಸು ಅಂತಾರೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. 2014ರಲ್ಲಿ ನೀನಾಸಂ ಸತೀಶ್, ಸಿಂಧು ಲೋಕನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ "ಲವ್ ಇನ್ ಮಂಡ್ಯ' ಚಿತ್ರದ ಮೂಲಕ ಅರಸು ಅಂತಾರೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು. ಇದೀಗ 11 ವರ್ಷಗಳ ಬಳಿಕ ಎರಡನೇ ಚಿತ್ರಕ್ಕೆ ಆ್ಯಕ್ಷನ್&ಕಟ್ ಹೇಳಲು ರೆಡಿಯಾಗಿದ್ದಾರೆ.
"ಇದೇ ತಾಳ್ಮೆಗೆ ಇರುವ ತಾಕತ್ತು. ಪ್ರಯತ್ನ ಮಾಡುತ್ತಿದ್ದೆ ಆದರೆ, 10 ವರ್ಷ ಸಮಯ ಕೂಡಿ ಬಂದಿರಲಿಲ್ಲ. ಈಗ ಕಾಲ ಕೂಡಿಬಂದಿದೆ. ಗಣೇಶ್ ಅವರ ಜತೆ ಸಿನಿಮಾ ಮಾಡುತ್ತಿದ್ದೇನೆ. ಅವರಿಗಾಗಿಯೇ ಮಾಡಿಕೊಂಡ ಕಥೆಯಿದು. ಅವರ ಬಳಿಯಿರುವ ಎಲ್ಲ ಅಸ್ತ್ರಗಳನ್ನೂ ಬಳಸಿಕೊಳ್ಳಲಿದ್ದೇವೆ. ಇದೊಂದು ಕಮರ್ಷಿಯಲ್ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಡ್ರಾಮಾ ಚಿತ್ರ. ಏ.6 ಮುಹೂರ್ತ ನೆರವೇರಿದ ಬಳಿಕ ಏ.7ರಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನೂರಕ್ಕೆ ಇನ್ನೂರು ಪರ್ಸೆಂಟ್ ಇದೇ ವರ್ಷ ಸಿನಿಮಾ ರಿಲೀಸ್ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಅರಸು ಅಂತಾರೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡುವ ಆಲೋಚನೆ ನಿರ್ದೇಶಕರದು. ಭದ್ರಾವತಿ ಮೂಲದ ವಿತರಕ ರವಿ ಎಸ್ಎನ್ಟಿ ಎಂಟರ್ಪೆಸಸ್ ಬ್ಯಾನರ್ನಲ್ಲಿ ಮೊದಲ ಬಾರಿಗೆ ಈ ಸಿನಿಮಾ ನಿರ್ಮಿಸಲಿದ್ದಾರೆ.
"ಕಾಳಿ', "ಬಿಗಿಲ್', "ರೆಡ್' ಜತೆಗೆ ಕಳೆದ ವರ್ಷ ತೆರೆಕಂಡ ಹಿಟ್ "ಹನುಮಾನ್' ಸೇರಿ 10ಕ್ಕೂ ಹೆಚ್ಚು ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿರುವ ಅಮೃತಾ ಅಯ್ಯರ್, ಅರಸು ಅಂತಾರೆ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಲಿದ್ದಾರೆ.
ಅವರ ಆಯ್ಕೆಯ ಬಗ್ಗೆ, "ನಾಯಕಿಯ ಪಾತ್ರಕ್ಕೆ ಸ್ಪಷ್ಟವಾಗಿ ಕನ್ನಡ ಮಾತನಾಡುವ, ಚುರುಕಾಗಿ ನಟಿಸುವಂತಹ ಹೊಸ ಮುಖ ಬೇಕಿತ್ತು. "ಹನುಮಾನ್' ಚಿತ್ರ ನೋಡಿದ್ದೆ. ಅದರಲ್ಲಿ ಅಮೃತಾ ತುಂಬ ಚೆನ್ನಾಗಿ ನಟಿಸಿದ್ದರು. ಅವರು ಕನ್ನಡದ ಹುಡುಗಿ ಅಂತ ಗೊತ್ತಾಗಿ, ಸಂಪರ್ಕಿಸಿದೆವು. ಅವರ ಕನ್ನಡ ತುಂಬ ಸ್ಪಷ್ಟವಾಗಿತ್ತು. ನಟನೆ, ಡೈಲಾಗ್ ಡೆಲಿವರಿ, ಡಬ್ಬಿಂಗ್ನಲ್ಲಿ ಎಲ್ಲವನ್ನೂ ಮಾಡುತ್ತಾರೆ ಅಂತ ಮನದಟ್ಟಾಯಿತು. ಅವರು ಕೂಡ ಮೊದಲ ಭೇಟಿಯಲ್ಲೇ ಕಥೆ ಒಪ್ಪಿಕೊಂಡರು. ಹೀಗಾಗಿ ನಾಯಕಿಗಾಗಿ ನಾವು ಹೆಚ್ಚು ಹುಡುಕಾಡಲಿಲ್ಲ' ಎನ್ನುತ್ತಾರೆ ಅರಸು ಅಂತಾರೆ. ಗಣೇಶ್, ಅಮೃತಾ ಜತೆ ರಮೇಶ್ ಇಂದಿರ, ರಂಗಾಯಣ ರು, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದು, ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣವಿರಲಿದೆ.