ಸಿನಿವಾಣಿ

ARASAYYANA PREMEPRASANGA REVIEW: ಕಿಲ ಕಿಲ ಪ್ರಸಂಗಗಳಲ್ಲಿ ವಿಲ ವಿಲ ಅರಸಯ್ಯ

ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ

ನಿರ್ದೇಶನ: ಜೆ.ವಿ.ಆರ್. ದೀಪು

ತಾರಾಗಣ: ಮಹಾಂತೇಶ ಹಿರೇಮಠ, ರಶ್ಮಿತಾ ಗೌಡ, ಪಿ.ಡಿ.ಸತೀಶ್, ರಘು ರಾಮನಕೊಪ್ಪ, ಮಂಜು ಮತ್ತಿತರರು

ಶಿವ ಸ್ಥಾವರಮಠ

ಕೆಟ್ಟು ಹೋದ ರೇಡಿಯೋ ರಿಪೇರಿ ಮಾಡಿಸಿಕೊಂಡು ಬರುವಂತೆ ಅರಸಯ್ಯನಿಗೆ (ಮಹಾಂತೇಶ) ಅಜ್ಜಿ ಹೇಳುತ್ತಾಳೆ. ಮದುವೆ ಮುರಿದು ಬಿದ್ದ ಚಿಂತೆಯಲ್ಲಿದ್ದ ಆತನಿಗೆ ಕಿರಿಕಿರಿ ಎನಿಸಿ, ಅಜ್ಜಿ ಕೈಲಿದ್ದ ರೇಡಿಯೋ ಕಸಿದುಕೊಂಡು ದೂರ ಎಸೆದುಬಿಡುತ್ತಾನೆ. ಗಂಡನ ನೆನಪಿಗೆ ಇರುವ ಒಂದೇ ಒಂದು ವಸ್ತು, ಅದನ್ನೂ ಹಾಳು ಮಾಡಿದೆಯಲ್ಲ ಎಂದು ಅಜ್ಜಿ, ಅರಸಯ್ಯನ ವಿರುದ್ಧ ಮುನಿಸಿಕೊಂಡು, ‘ಸಂಬಂಧಗಳು ಹಾಳಾಗಬಹುದು, ಅವರ ಕೊಟ್ಟ ನೆನಪು ಎಂದಿಗೂ ಶಾಶ್ವತ’ ಎನ್ನುವ ಮಾತು ಅರಸಯ್ಯನಿಗೆ ನಾಟುತ್ತದೆ. ಅಲ್ಲಿಯವರೆಗೂ ಕಿಲ ಕಿಲ ನಗಿಸುತ್ತಿದ್ದ ಕಥೆಯು ಒಮ್ಮಿಂದೊಮ್ಮೆಲೆ ಗಂಭೀರ ರೂಪ ಪಡೆದುಕೊಳ್ಳುತ್ತದೆ. ಆ ಮೂಲಕ ನಗುವಿನ ಅಲೆಯಲ್ಲಿ ಸಂಬಂಧಗಳ ಭಾವತೀವ್ರತೆ ಹಾಗೂ ಮನುಷ್ಯನ ಮೌಢ್ಯತೆಯನ್ನು ‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರ ಚರ್ಚಿಸುತ್ತದೆ. ಇಡೀ ಕಥೆಯಲ್ಲಿ ಅರಸಯ್ಯ ಒಂದು ಪಾತ್ರವಷ್ಟೇ. ಆತನ ಮೂಲಕ ಮದುವೆ ಸುತ್ತಲಿನ ನಂಬಿಕೆ, ಅಪನಂಬಿಕೆಗಳ ಬಗ್ಗೆ ಈ ಕಥೆ ಬೆಳಕು ಚೆಲ್ಲುತ್ತದೆ.

‘ಅರಸಯ್ಯನ ಪ್ರೇಮಪ್ರಸಂಗ’ದ ಮೂಲಕ ನಿರ್ದೇಶಕ ಜೆ.ವಿ.ಆರ್. ದೀಪು ಸುಂದರ, ಮನಸ್ಸಿಗೆ ಹತ್ತಿರವಾಗುವ ಕಥೆ ಹೇಳಿದ್ದಾರೆ. ಯಾವುದೇ ಅನಾವಶ್ಯಕ ದೃಶ್ಯ, ಪಾತ್ರಗಳನ್ನು ಸೇರಿಸದೆ, ಇರುವ ಪಾತ್ರಗಳನ್ನೇ ಬಳಸಿಕೊಂಡು ನಗಿಸಿದ್ದಾರೆ. ಸಿನಿಮಾ ಎಲ್ಲಿಯೂ ಬೋರ್ ಅನಿಸುವುದಿಲ್ಲ. 123 ನಿಮಿಷಗಳ ಕಥೆಯಲ್ಲಿ ಬಹುತೇಕ ನಗಿಸಿದರೆ, ಕೊನೆಯ 30 ನಿಮಿಷ ಕಥೆಯ ದಿಕ್ಕೇ ಬದಲಾಗಿ, ಪ್ರೇಕ್ಷಕನನ್ನು ಗಂಭೀರರನ್ನಾಗಿಸುತ್ತದೆ. ‘ಸು ಫ್ರಮ್​ ಸೋ’ ನಂತೆ ನಗು ನಗಿಸುತ್ತಲೇ ಸಮಾಜದ ಮೌಢ್ಯವನ್ನು ಪ್ರಶ್ನಿಸುತ್ತದೆ. ಮಹಾಂತೇಶ ಹಿರೇಮಠ, ಪಿಡಿ ಸತೀಶ್ ಇಡೀ ಕಥೆಯನ್ನು ಹೊತ್ತು ಸಾಗಿದ್ದಾರೆ. ಇವರ ಜುಗಲ್‌ಬಂದಿ ಇಷ್ಟವಾಗುತ್ತದೆ. ರಶ್ಮಿತಾ ಗೌಡ ಪಾತ್ರ ಚೆನ್ನಾಗಿ ಮೂಡಿಬಂದಿದ್ದು, ಅವರು ಸಹ ಅಂದವಾಗಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಪೂರಕವಾಗಿ ಹಲವು ಪಾತ್ರಗಳಿದ್ದು, ಎಲ್ಲವೂ ಕಥೆಯನ್ನು ಹೊತ್ತು ಮುಂದೆ ಸಾಗಿವೆ. ದೀಪು ಪಟಾಕಿಯಂತಹ ಸಂಭಾಷಣೆ ಪ್ರೇಕ್ಷಕರನ್ನು ಕಿಲ ಕಿಲ ನಗಿಸುತ್ತದೆ. ಡೈಲಾಗ್ಸ್ ಚಿತ್ರದ ಪ್ರಮುಖ ಹೈಲೈಟ್. ಗುರುಪ್ರಸಾದ್ ನಾರ್ನಡ್ ಗುರುವಿನಮಠವನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಪ್ರದೀಪ್, ಪ್ರವೀಣ್ ಸಂಗೀತ ಕೇಳಲು ಇಂಪಾಗಿದೆ.

ರೇಟಿಂಗ್: 3.5