ಸಿನಿವಾಣಿ

aram aravindaswamy film review: ನವಿರು ಪ್ರೇಮಕಥೆಗೆ ತಿಳಿಹಾಸ್ಯದ ಲೇಪನ

ಚಿತ್ರ: ‘ಆರಾಮ್ ಅರವಿಂದ ಸ್ವಾಮಿ’

ನಿರ್ದೇಶನ: ಅಭಿಷೇಕ್ ಶೆಟ್ಟಿ

ನಿರ್ಮಾಣ: ಶ್ರೀಕಾಂತ್ ಪ್ರಸನ್ನ, ಎಸ್.ಪ್ರಶಾಂತ್ ರೆಡ್ಡಿ

ತಾರಾಗಣ: ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್, ಅಚ್ಯುತ್‌ಕುಮಾರ್, ಗೌರವ್ ಶೆಟ್ಟಿ ಮತ್ತಿತರರು

ಸಮಾಜದಲ್ಲಿ ಜನ ಔಟ್‌ಲುಕ್‌ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಉಡುಗೆ, ಸ್ಟೈಲ್ ಹಾಗೂ ವರಸೆ ನೋಡಿಯೇ ಅವರು ಆರಾಮಾಗಿದ್ದಾರೆ ಎಂದು ಭಾವಿಸುತ್ತಾರೆ. ಅವರೊಳಗಿನ ಸಂಕಟ, ನೋವು, ಹತಾಶೆ ಯಾರಿಗೂ ಗೊತ್ತಿರುವುದಿಲ್ಲ. ಇಂತಹದ್ದೇ ಒಬ್ಬ ವ್ಯಕ್ತಿಯ ಕಥೆಯನ್ನು ತಿಳಿಹಾಸ್ಯದ ಜತೆ ನಿರ್ದೇಶಕ ಅಭಿಷೇಕ್ ಶೆಟ್ಟಿ ‘ಆರಾಮ್ ಅರವಿಂದಸ್ವಾಮಿ’ಯಲ್ಲಿ ನಿರೂಪಿಸಿದ್ದಾರೆ.

ಅರವಿಂದಸ್ವಾಮಿ (ಅನೀಶ್ ತೇಜೇಶ್ವರ) ಬದುಕನ್ನು ಎಂಜಾಯ್ ಮಾಡುವಾತ. ಏನೇ ಬಂದರೂ, ಆದರೂ ಡೌಂಟ್ ಕೇರ್ ವ್ಯಕ್ತಿ. ಈತನ ಪ್ರೇಯಸಿ ಶಿಕ್ಷಕಿ ಗೀತಾ (ಮಿಲನಾ ನಾಗರಾಜ್). ಇಬ್ಬರದೂ ಆರು ವರ್ಷಗಳ ಪ್ರೀತಿ. ಅರವಿಂದ ಕೆಲವು ವಿಷಯಗಳನ್ನು ಮುಚ್ಚಿಟ್ಟು ಜೀವನ ಸಾಗಿಸುತ್ತಿರುತ್ತಾನೆ. ಇದೇ ಮುಂದೆ ಹಲವು ಅವಾಂತರಕ್ಕೆ ಕಾರಣವಾಗಿಬಿಡುತ್ತದೆ. ಅಷ್ಟಕ್ಕೂ, ಇಲ್ಲಿ ಸೃಷ್ಟಿಯಾದ ಬಿಕ್ಕಟ್ಟಾದರೂ ಏನು? ಎಂಬುದೇ ಮುಂದಿನ ಕಥೆ.

ರೊಮ್ಯಾಂಟಿಕ್-ಕಾಮಿಡಿ ಜಾನರ್‌ನ ‘ಆರಾಮ್ ಅರವಿಂದ ಸ್ವಾಮಿ’ಯಲ್ಲಿ ನವೀರಾದ ಪ್ರೇಮವಿದೆ ಜತೆಗೆ ಬದುಕಿನ ಕ್ಷಣಗಳಿವೆ. ಒಂದು ಘಳಿಗೆ ಹಾಗೂ ಸಂಬಂಧ ಎಷ್ಟು ಮುಖ್ಯ ಎಂಬುದನ್ನು ತಿಳಿಸುವ ಪ್ರಯತ್ನ ನಿರ್ದೇಶಕರದ್ದು. ಚಿತ್ರದ ಕಥೆಯನ್ನು ಒಂದೇ ಲೈನ್‌ನಲ್ಲಿ ಹೇಳಿ ಮುಗಿಸಿದ್ದಾರೆ. ಅದಕ್ಕೆ ತಕ್ಕಂತೆ ನವಿರಾದ ಹಾಸ್ಯ, ಎಮೋಷನ್, ಆಳವಾದ ಪ್ರೀತಿಯನ್ನು ಹೊಂದಿಸಿದ್ದಾರೆ. ಹೀಗಾಗಿ ಇಡೀ ಚಿತ್ರ ಎಲ್ಲಿಯೂ ಬೋರ್ ಎನಿಸದೆ ನೋಡಿಸಿಕೊಳ್ಳುತ್ತದೆ.

ಇಡೀ ಕಥೆಯಲ್ಲಿ ಅನೀಶ್ ತೇಜೇಶ್ವರ್ ಹೆಚ್ಚು ಕಾಣಿಸಿಕೊಂಡಿದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಕ್ಸಸ್ ಎದುರು ನೋಡುತ್ತಿರುವ ಅವರಿಗೆ ಈ ಸಿನಿಮಾ ಒಂದು ಟರ್ನಿಂಗ್ ಪಾಯಿಂಟ್ ನೀಡಲಿದೆ ಎನ್ನಬಹುದು. ಮಿಲನಾ ನಾಗರಾಜ್ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಹೃತಿಕಾ ಶ್ರೀನಿವಾಸ್ ಕಣ್ಣಿನಲ್ಲಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಗೌರವ್ ಶೆಟ್ಟಿ, ಆರ್.ಜೆ.ವಿಕ್ಕಿ ಪಾತ್ರಗಳು ಕಥೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತವೆ. ಅರ್ಜುನ್ ಜನ್ಯ ಸಂಗೀತ ಮೆಲೋಡಿ ಆಗಿದೆ. ಶಿವಸಾಗರ್ ಛಾಯಾಗ್ರಹಣ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಂತೆ ಬದುಕು ಅನುಭವಿಸು ಎಂಬ ಸಂದೇಶ ನೀಡುವ ಅರವಿಂದಸ್ವಾಮಿ ಕಥೆಯನ್ನು ಕುಟುಂಬ ಸಮೇತರಾಗಿ ನೋಡಬಹುದು.