AR Rehaman : ಸಿನಿಮಾ ಇಂಡಸ್ಟ್ರಿಯಲ್ಲಿ ಡಿವೋರ್ಸ್ ಸರಣಿ ಮುಂದುವರಿದಿದೆ. ಕೆಲ ತಿಂಗಳುಗಳ ಹಿಂದಷ್ಟೇ ಸ್ಟಾರ್ ನಟ ಜಯಂ ರವಿ ಡಿವೋರ್ಸ್ ಘೋಷಣೆ ಮಾಡಿದ್ದರು. ಇದೀಗ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಪತ್ನಿ ಸಾಯಿರಾ ಅವರು ಡಿವೋರ್ಸ್ ಘೋಷಣೆ ಮಾಡಿದ್ದಾರೆ.
ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮದುವೆಯಾಗಿ ಹಲವು ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರವನ್ನು ಸೃಷ್ಟಿಸಿವೆ ಎಂದು ವಂದನಾ ಶಾ ತಿಳಿಸಿದ್ದಾರೆ.
ಸಾಯಿರಾ ಅವರು ತುಂಬಾ ನೋವು ಮತ್ತು ಸಂಕಟದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ತಮ್ಮ ಜೀವನದ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಸಾರ್ವಜನಿಕರು ತಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಸಾಯಿರಾ ಬಯಸಿದ್ದಾರೆ ಎಂದು ವದಂನಾ ಶಾ ಹೇಳಿದ್ದಾರೆ.
ರೆಹಮಾನ್ ಕೂಡ ಡಿವೋರ್ಸ್ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ರೆಹಮಾನ್ ಮತ್ತು ಸಾಯಿರಾ 1995ರಲ್ಲಿ ವಿವಾಹವಾದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ಇದೀಗ 29 ವರ್ಷಗಳ ವೈವಾಹಿಕ ಬದುಕಿಗೆ ಕೊನೆಯಾಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ರೆಹಮಾನ್ ಕೊನೆಯದಾಗಿ ಧನುಷ್ ಅವರ ಎರಡನೇ ನಿರ್ದೇಶನದ ರಾಯನ್ಗೆ ಸಂಗೀತ ಸಂಯೋಜಿಸಿದರು. ಚಾವಾ ಹಾಗೂ ಥಗ್ ಲೈಫ್ ಸೇರಿದಂತೆ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿರುವ ಗಾಂಧಿ ಟಾಕ್ಸ್ ಹಾಗೂ ಹಲವು ಭಾಷೆಯ ಹಲವು ಚಿತ್ರಗಳಿಗೂ ಸಂಗೀತ ನೀಡುತ್ತಿದ್ದಾರೆ. (ಏಜೆನ್ಸೀಸ್)