ಸಿನಿವಾಣಿ

ಕಾಲಾ ಪತ್ಥರ್​ನಲ್ಲಿ ಅಪೂರ್ವ ಶಿಕ್ಷಕಿ; ವಿಕ್ಕಿ ವರುಣ್​ಗೆ ನಾಯಕಿ ಸಿಕ್ಕಳು

ಬೆಂಗಳೂರು: ಯಾರಿರಬಹುದು ಊಹಿಸಿ? ಆ ನಾಯಕಿಯ ಅರ್ಧ ಮುಖ ಮಾತ್ರ ತೋರಿಸಿ, ಈ ನಟಿಯೇ ನಮ್ಮ ಚಿತ್ರದ ನಾಯಕಿ ಎಂದು ‘ಕಾಲಾ ಪತ್ಥರ್’ ಚಿತ್ರತಂಡದವರು ಹೇಳಿದ್ದರು. ನಾಯಕಿ ಯಾರು ಎಂದು ಭಾನುವಾರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ‘ಅಪೂರ್ವ’ ಸಿನಿಮಾ ಖ್ಯಾತಿಯ ಅಪೂರ್ವ ಅವರನ್ನು ನಾಯಕಿ ಎಂದು ಚಿತ್ರತಂಡ ಘೋಷಿಸಿದೆ.

ಈ ಬಗ್ಗೆ ವಿಜಯವಾಣಿ ಪ್ರತಿಕ್ರಿಯೆ ನೀಡುವ ಅಪೂರ್ವ, ಪಾತ್ರದ ಬಗ್ಗೆ ವಿವರಿಸಿದ್ದಾರೆ. ‘ಕಥೆ ಹೇಳಿದ ತಕ್ಷಣ ಆಯ್ದುಕೊಂಡೆ. ಇಲ್ಲಿ ಹಳ್ಳಿಯೊಂದರ ಸ್ವಾಭಿಮಾನಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಚಿಕ್ಕಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯ ಪಾತ್ರ ನನ್ನದು. ಇಲ್ಲಿಯವರೆಗೂ ಗ್ಲಾಮರಸ್ ಪಾತ್ರದ ಮೂಲಕವೇ ಎದುರಾಗಿದ್ದೆ. ಈ ಸಿನಿಮಾದಲ್ಲಿ ಸಂಪೂರ್ಣ ತದ್ವಿರುದ್ಧ. ಡಿಗ್ಲಾಮ್ ಲುಕ್ ನನಗಿರಲಿದೆ. ಈಗಾಗಲೇ ಬಹುತೇಕ ಪಾತ್ರಗಳ ಆಯ್ಕೆ ಕೊನೇ ಹಂತದಲ್ಲಿರುವುದರಿಂದ ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾಗಲಿದೆ’ ಎಂಬುದು ಅಪೂರ್ವ ಮಾತು. ‘ಕೆಂಡಸಂಪಿಗೆ’ ಮತ್ತು ‘ಕಾಲೇಜ್ ಕುಮಾರ’ ಸಿನಿಮಾದಿಂದಲೇ ಗುರುತಿಸಿಕೊಂಡಿರುವ ವಿಕ್ಕಿ ವರುಣ್ ಈ ಚಿತ್ರಕ್ಕೆ ನಾಯಕ. ಈಗಾಗಲೇ ಅವರ ಫಸ್ಟ್​ಲುಕ್ ಸಹ ಸದ್ದು ಮಾಡುತ್ತಿದ್ದು, ಇದೀಗ ಅಪೂರ್ವ ಅವರ ಟೀಚರ್ ಲುಕ್ ಸಹ ಗಮನಸೆಳೆಯುತ್ತಿದೆ.

‘ರಾಮಾ ರಾಮಾ ರೇ’ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ‘ಒಂದಲ್ಲ ಎರಡಲ್ಲ’ ಸಿನಿಮಾ ನಿರ್ದೇಶಿಸಿರುವ ಸೂತ್ರಧಾರ ಸತ್ಯಪ್ರಕಾಶ್,‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿರುವುದು ವಿಶೇಷ. ಈಗಾಗಲೇ ರಕ್ಷಿತ್ ಶೆಟ್ಟಿ ಅವರ ಜತೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದ ಚೇತನ್, ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕಿಳಿಯುತ್ತಿದ್ದಾರೆ. ನವೀನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.