'ಬಾಹುಬಲಿ'... ಎಸ್.ಎಸ್.ರಾಜಮೌಳಿ ಅವರ ಈ ಸಿನಿಮಾ ರಿಲೀಸ್ ಆದ ಬಳಿಕ ಹರಿದಾಡಿದ ಗಾಸಿಪ್ಗಳು ಒಂದೆರಡಲ್ಲ. ನಿರ್ದೇಶಕ ಎಸ್.ಎಸ್.ರಾಜಮೌಳಿ ಇಂದ ಹಿಡಿದು ಚಿತ್ರದಲ್ಲಿ ನಟಿಸಿದ ಎಲ್ಲಾ ನಟರ ಬಗ್ಗೆ ಒಂದಲ್ಲಾ ಒಂದು ಕಾರಣಕ್ಕೆ ಗಾಸಿಪ್ಗಳು ಹರಿದಾಡಿದವು. ಅದರಲ್ಲಿಯೂ, ಡಾರ್ಲಿಂಗ್ ನಟ ಪ್ರಭಾಸ್ ಮತ್ತು ಕರಾವಳಿಯ ಸುಂದರಿ ನಟಿ ಅನುಷ್ಕಾ ಅವರ ಮದುವೆ ಬಗ್ಗೆ ಹರಿದಾಡಿದ ಗಾಸಿಪ್‌ಗಳಿಗೆ ಅಂತೂ ಲೆಕ್ಕವೇ ಇಲ್ಲ. ಸ್ವತಃ, ಪ್ರಭಾಸ್ ಮತ್ತು ಅನುಷ್ಕಾ ಅವರೇ ತಾವಿಬ್ಬರೂ ಒಳ್ಳೆ ಸ್ನೇಹಿತರು ಅನ್ನೋ ಮೂಲಕ ಗಾಸಿಪ್ಗಳನ್ನು ತಳ್ಳಿ ಹಾಕಲಾಗುತ್ತಿದ್ದರು. ಆದರೂ, ಇವರಿಬ್ಬರ ನಡುವೆ ಏನೋ ಇದೆ ಅನ್ನೋ ಡೌಟ್ ಅಭಿಮಾನಿಗಳಿಗಿತ್ತು. ಮತ್ತೊಂದೆಡೆ, ಈ ಸಿನಿಮಾದಲ್ಲಿ ತಮ್ಮ ನಟನೆಯ ಮೂಲಕ ಬಹಳಷ್ಟು ಮೋಡಿ ಮಾಡಿದ ಈ ಜೋಡಿಯನ್ನು 'ದಿ ಬೆಸ್ಟ್ ಜೋಡಿ' ಎಂದು ಕರೆಯಲಾಗಿತ್ತು.
ಬಳಿಕ, 'ಬಾಹುಬಲಿ'ಯಲ್ಲಿ ಈ ಜೋಡಿ ಮಾಡಿದ ಮೋಡಿ ಕಂಡ ಅಭಿಮಾನಿಗಳು ಎಲ್ಲರೂ ಈ ಜೋಡಿ ಮತ್ತೆ ಯಾವಾಗ ಒಂದಾಗುತ್ತೆ ಎಂದು ಕಾಯುತ್ತಿದ್ದರು. ಹಾಗೆ, ಕಾದು ಕುಳಿತ್ತಿದ್ದ ಎಲ್ಲಾ ಅಭಿಮಾನಿಗಳಿಗೆ ಇದೀಗ ಒಂದು ಗುಸು ಗುಸು ಸುದ್ದಿ ಪಕ್ಕಾ ಸಂತಸ ನೀಡಲಿದೆ. ಹೌದು, ಆ ಸುದ್ದಿಯೇ ಮತ್ತೆ ಈ ಮ್ಯಾಜಿಕಲ್ ಜೋಡಿ ತೆರೆ ಮೇಲೆ ಒಂದಾಗಲಿದ್ದಾರೆ ಎಂಬುದು. ಹೌದು, ತೆಲುಗಿನ ಸಕ್ಸಲ್‌ಫುಲ್ ನಿರ್ದೇಶಕ ಮಾರುತಿ ಅವರು ನಟ ಪ್ರಭಾಸ್ ಜತೆಗೆ 'ರಾಜ ಡಿಲಕ್ಸ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕ ಮಾರುತಿ ಅವರು ಪ್ಯಾನ್ ಇಂಡಿಯಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಮೂವರು ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಈಗಾಗಲೇ ಹಲವು ಬಾರಿ ಕೇಳಿಬಂದಿವೆ.
ಹೀಗೆ, ಈ ಮೂವರು ನಾಯಕಿಯರ ಪಾತ್ರಗಳಿಗೆ ಮೊದಲು ನಟಿ ಮಾಳವಿಕಾ ಮೋಹನನ್, ನಟಿ ಶ್ರೀಲೀಲಾ, ನಟಿ ಮೆಹ್ರೀನ್ ಪಿರ್ಜಾದ ಅವರ ಹೆಸರುಗಳು ಕೇಳಿಬಂದವು. ನಂತರ, ನಟಿ ಮಾಳವಿಕಾ ಮೋಹನನ್, ನಟಿ ಶ್ರೀಲೀಲಾ ಹೆಸರಿನ ಜತೆಗೆ ನಟಿ ಕೃತಿ ಶೆಟ್ಟಿ ಹೆಸರು ಕೇಳಿಬಂದಿದೆ. ಕಾರಣ, ನಟಿ ಮೆಹ್ರೀನ್ ಪಿರ್ಜಾದ ಅವರು ಈ ಚಿತ್ರದಿಂದ ಹೊರ ನಡೆದರು ಎನ್ನಲಾಗಿತ್ತು. ಇದೀಗ, ನಟಿ ಮಾಳವಿಕಾ ಮೋಹನನ್, ನಟಿ ಶ್ರೀಲೀಲಾ ಅವರ ಹೆಸರುಗಳ ಜತೆಗೆ ನಟಿ ಅನುಷ್ಕಾ ಶೆಟ್ಟಿ ಅವರ ಹೆಸರು ಕೇಳಿಬರುತ್ತಿದೆ. ಕಾರಣ, ನಟಿ ಕೃತಿ ಶೆಟ್ಟಿ ಅವರು ಸದ್ಯ ನಟ ಪವನ್ ಕಲ್ಯಾಣ್ ಅವರ ಚಿತ್ರಕ್ಕೆ ಆಯ್ಕೆಯಾಗಿದ್ದು, ಅವರು ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರಂತೆ. ಡೇಟ್ಗಳು ಫ್ರೀ ಇಲ್ಲದ ಕಾರಣ ನಟಿ ಕೃತಿ ಶೆಟ್ಟಿ ಅವರು ಕೂಡಾ 'ರಾಜ ಡಿಲಕ್ಸ್' ಸಿನಿಮಾಗೆ ಸಹಿ ಹಾಕುವುದು ಕಷ್ಟ ಎನ್ನಲಾಗಿದೆ.
ಹೀಗಾಗಿ, ಈ ಸಿನಿಮಾದ ಮಾತುಕತೆಯನ್ನು ನಟಿ ಅನುಷ್ಕಾ ಶೆಟ್ಟಿ ಅವರ ಜತೆಗೆ ನಡೆಸಲಾಗಿದ್ದು, ನಟ ಪ್ರಭಾಸ್ ಜೊತೆ ನಟಿಸಲು ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ, ಈ ಬಗ್ಗೆ ಅಧಿಕೃತ ಘೋಷಣೆಯೊಂದು ಬಾಕಿ ಎನ್ನಬಹುದು. ಇನ್ನು, ಇಷ್ಟು ದಿನ ನಟಿ ಮಾಳವಿಕಾ ಮೋಹನನ್ ಪ್ರಮುಖ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತು. ಆದರೆ, ಈಗ ನಟಿ ಅನುಷ್ಕಾ ಶೆಟ್ಟಿ ಆಯ್ಕೆ ಎಂಬ ಸುದ್ದಿ ಕೇಳಿ ಯಾರು ಪ್ರಮುಖ ನಾಯಕಿ ಆಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಅಭಿಮಾನಿಗಳ ಪ್ರಕಾರ ಅಂತೂ ನಟಿ ಅನುಷ್ಕಾ ಶೆಟ್ಟಿ ಅವರೇ ಪ್ರಮುಖ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ.