ಹೈದರಾಬಾದ್: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ 'ನಿಶ್ಯಬ್ದಂ' ಚಿತ್ರದ ನಂತರ ಅನುಷ್ಕಾ ಶೆಟ್ಟಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ನವೀನ್ ಪೊಲಿಶೆಟ್ಟಿ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುವ ಸುದ್ದಿಯಾಗಿತ್ತಾದರೂ, ಆ ಚಿತ್ರದ ಹೆಸರೇನು? ಅದರಲ್ಲಿ ಅವರ ಪಾತ್ರವೇನು? ಮುಂತಾದ ಯಾವ ವಿಷಯಗಳಿಗೂ ಉತ್ತರ ಸಿಕ್ಕಿರಲಿಲ್ಲ. ಈಗ ಈ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.
ಸೋಮವಾರ ಅನುಷ್ಕಾ ಶೆಟ್ಟಿ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಹೊಸ ಚಿತ್ರದ ಪೋಸ್ಟರ್ವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಅವರು ಚೆಫ್ ಆಗಿ ಅಭಿನಯಿಸುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಚಿತ್ರದಲ್ಲಿ ಅವರ ಹೆಸರು ಅನ್ವಿತಾ ರವಳಿ ಶೆಟ್ಟಿ ಎಂದಾಗಿರುತ್ತದೆ. ತಮ್ಮ ಪಾತ್ರವನ್ನು ಪರಿಚಯಿಸಿಕೊಂಡಿರುವ ಅನುಷ್ಕಾ, ಆದಷ್ಟು ಬೇಗ ತೆರೆಯ ಮೇಲೆ ಕಾಣಿಸಿಕೊಳ್ಳುವ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
ಅನುಷ್ಕಾ ತಮ್ಮ ಹೊಸ ಚಿತ್ರದ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆಯೇ, ಅವರ ಅಭಿಮಾನಿಗಳು ಖುಷಿಯಾದರು. ಚಿತ್ರಕ್ಕೆ ಕಾಯುತ್ತಿರುವುದಾಗಿ ಹೇಳಿದರು. ಆದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಇನ್ನೂ ಹೆಸರಿಡದ ಈ ಚಿತ್ರವನ್ನು ಮಹೇಶ್ ಬಾಬು ಪಚಿಗೊಲ್ಲ ನಿರ್ಮಿಸಿದರೆ, ನವೀನ್ ಪೊಲಿಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ನಡಿ ಈ ಚಿತ್ರವು ನಿರ್ಮಾಣಗೊಳ್ಳುತ್ತಿದೆ.