ಸಿನಿವಾಣಿ

ವದಂತಿಗಳಿಂದ ಬೇಸರಗೊಂಡ ಅನುಷ್ಕಾ ಶೆಟ್ಟಿ ತನ್ನ ಮದುವೆ ಕುರಿತು ಹೇಳಿದ್ದು ಹೀಗೆ...

ಹೈದರಾಬಾದ್​: ನಟಿ ಅನುಷ್ಕಾ ಶೆಟ್ಟಿ ವಿವಾಹ ಕುರಿತು ನಿರಂತರವಾಗಿ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಬೇಸರಗೊಂಡಿರುವ ಅನುಷ್ಕಾ, ಯಾರ‍್ಯಾರಿಗೋ ಸಂಬಂಧ ಕಲ್ಪಿಸುವುದರಿಂದ ನನ್ನ ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸೂಪರ್​ ಹಿಟ್ ಚಿತ್ರ ಬಾಹುಬಲಿ ನಂತರ ಪ್ರಭಾಸ್​ ಮತ್ತು ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ ಎಂಬ ವದಂತಿ ಈ ಹಿಂದೆ ಹಬ್ಬಿತ್ತು. ಆದರೆ, ಇಬ್ಬರು ಕಲಾವಿದರು ಅದನ್ನು ತಳ್ಳಿ ಹಾಕಿದ್ದರು. ಬಳಿಕ ಹೆಸರೇಳದ ಕ್ರಿಕೆಟಿಗನೊಬ್ಬನ ಜತೆ ಅನುಷ್ಕಾ ಹೆಸರು ತಳುಕು ಹಾಕಿಕೊಂಡಿತ್ತು. ಈ ವೇಳೆಯೂ ಸಹ ವದಂತಿ ಅಲ್ಲಗೆಳೆದಿದ್ದ ಅನುಷ್ಕಾ, ನನ್ನ ಮದುವೆ ನಿರ್ಧಾರವನ್ನು ನನ್ನ ಕುಟುಂಬಕ್ಕೆ ಬಿಟ್ಟಿದ್ದೇನೆ. ಖಂಡಿತವಾಗಿ ನನ್ನದು ಅರೇಂಜ್​ ಮ್ಯಾರೇಜ್​ ಆಗಿರುತ್ತದೆ ಎಂದು ತಿಳಿಸಿದ್ದರು.

ಇಷ್ಟೆಲ್ಲ ಸ್ಪಷ್ಟನೆ ನೀಡಿದರೂ ಇತ್ತೀಚೆಗಷ್ಟೇ ಅನುಷ್ಕಾ ಕುರಿತು ಮತ್ತೊಂದು ವದಂತಿ ಹುಟ್ಟುಕೊಂಡಿತ್ತು. ಜಡ್ಜ್​ಮೆಂಟಲ್​ ಹೈ ಕ್ಯಾ ಚಿತ್ರದ ನಿರ್ದೇಶಕ ಪ್ರಕಾಶ್​ ಕೊವೆಲಮುಡಿ ಅವರನ್ನು ಅನುಷ್ಕಾ ವರಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.

ತಮ್ಮ ಮುಂದಿನ ನಿಶ್ಯಬ್ಧಂ ಚಿತ್ರದ ಪ್ರಚಾರ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅನುಷ್ಕಾ, ವದಂತಿಗಳನ್ನು ಯಾರು ಹರಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅದರಿಂದ ಖಂಡಿತವಾಗಿ ನನ್ನ ಕುಟುಂಬಕ್ಕೆ ಸಮಸ್ಯೆಯಾಗುತ್ತದೆ. ನಾನು ಏನೆಂಬುದು ನನ್ನ ಜತೆ ಆಪ್ತರಾಗಿರುವವರಿಗೆ ತಿಳಿದಿದೆ. ನಾನು ಯಾವುದೇ ಗಾಸಿಪ್​ಗೆ ಮಹತ್ವ ನೀಡುವುದಿಲ್ಲ. ಆದರೂ, ಗಾಸಿಪ್​ನಿಂದ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)