ಸಿನಿವಾಣಿ

ಚಂದ್ರಮುಖಿಯಾಗ್ತಾರಾ ಅನುಷ್ಕಾ?

ರಾಘವ ಲಾರೆನ್ಸ್ ಅಭಿನಯದಲ್ಲಿ ‘ಚಂದ್ರಮುಖಿ 2’ ಎಂಬ ಚಿತ್ರವನ್ನು ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷವೇ ಬಂದಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗಿದೆ. ಈಗ ಚಿತ್ರದಲ್ಲಿ ಚಂದ್ರಮುಖಿಯಾಗಿ ಅನುಷ್ಕಾ ನಟಿಸಲಿದ್ದಾರೆ ಮತ್ತು ಈ ಮೂಲಕ ನಾಲ್ಕು ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಮತ್ತೊಮ್ಮೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದಲ್ಲಿನ ಪ್ರಮುಖ ಪಾತ್ರ ಮಾಡುವುದಕ್ಕೆ ಚಿತ್ರತಂಡದವರು, ಅನುಷ್ಕಾ ಅವರನ್ನು ಕಳೆದ ವರ್ಷವೇ ಸಂರ್ಪಸಿದ್ದರಂತೆ. ಆದರೆ, ಅನುಷ್ಕಾ ಆ ಸಂದರ್ಭದಲ್ಲಿ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರಿಂದ, ಚಿತ್ರದಲ್ಲಿ ನಟಿಸುವುದಕ್ಕೆ ಹಿಂದೇಟು ಹಾಕಿದ್ದರಂತೆ. ಆದರೆ, ಕಾರಣಾಂತರಗಳಿಂದ ಚಿತ್ರ ಸೆಟ್ಟೇರುವುದು ತಡವಾಗಿದೆ. ಇನ್ನೊಂದು ಕಡೆ, ಅನುಷ್ಕಾ ಸಹ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡದವರು ಅವರನ್ನು ಭೇಟಿ ಮಾಡಿ, ಇನ್ನೊಮ್ಮೆ ಆಫರ್ ಕೊಟ್ಟಿದ್ದಾರೆ.

ಚಿತ್ರಕಥೆ ಮತ್ತು ತಮ್ಮ ಪಾತ್ರ ರೂಪುಗೊಂಡಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅನುಷ್ಕಾ, ಚಿತ್ರದಲ್ಲಿ ನಟಿಸುವುದಕ್ಕೆ ಒಲವು ತೋರಿದ್ದಾರಂತೆ. ಆದರೆ, ಇನ್ನೂ ಅಗ್ರಿಮೆಂಟ್ ಆಗಿರದ ಕಾರಣ, ಅಧಿಕೃತ ಘೋಷಣೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ‘ಚಂದ್ರಮುಖಿ 2’ ಚಿತ್ರದಲ್ಲಿ ಲಾರೆನ್ಸ್ ಅಲ್ಲದೆ ವಡಿವೇಲು ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸನ್ ಪಿಕ್ಚರ್ಸ್ ಸಂಸ್ಥೆಯು ಚಿತ್ರವನ್ನು ನಿರ್ವಿುಸುತ್ತಿದೆ.