ನಟಿ ಅನುಪಮಾ ಗೌಡ ಅಭಿನಯದ ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಫೆ.14ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ, ಸಿನಿಜೀವನ ಕುರಿತು ಅವರು ಹಂಚಿಕೊಂಡಿರುವ ಅನಿಸಿಕೆಗಳ ಸಂಕ್ಷಿಪ್ತ ರೂಪ ಇಲ್ಲಿದೆ.
ಬೆಂಗಳೂರು: ‘ಸದ್ಯಕ್ಕೆ ಆಂಕರಿಂಗ್ನಿಂದಲೂ ವಿಮುಖಳಾಗಿದ್ದೇನೆ. ಈ ವರ್ಷ ಏನಿದ್ದರೂ ಸಿನಿಮಾಗೇ ಆದ್ಯತೆ. 2020 ಬರೀ ಸಿನಿಮಾಗೇ ಮೀಸಲು..’ - ಶುಕ್ರವಾರ ಬಿಡುಗಡೆ ಆಗುತ್ತಿರುವ ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಕುರಿತು ಮಾತನಾಡುತ್ತ ಈ ವರ್ಷದ ತಮ್ಮ ನಿರೀಕ್ಷೆಯ ಬಗ್ಗೆಯೂ ಮಾತನಾಡಿದರು ನಟಿ ಅನುಪಮಾ ಗೌಡ.
‘ಬಿಗ್ಬಾಸ್ ಬಳಿಕ ‘ಆ ಕರಾಳ ರಾತ್ರಿ’ ಸಿನಿಮಾದಲ್ಲಿ ಮಾಡಿದೆ. ಅದು ಒಳ್ಳೆಯ ಮೆಚ್ಚುಗೆ ಪಡೆಯಿತು. ನಂತರ ಅನೇಕ ಸಿನಿಮಾಗಳಲ್ಲಿ ತೊಡಗಿಸಿಕೊಂಡೆ. ಆದರೆ ಯಾವುದನ್ನೂ ಪ್ಲಾ್ಯನ್ ಮಾಡಿ ಮಾಡಿಲ್ಲ. ಅವಕಾಶಗಳು ಬಂದಂತೆ ಸ್ವೀಕರಿಸುತ್ತ ಬಂದೆ. ಸದ್ಯ ಸಿನಿಮಾ ಮೇಲೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ ಈಗ ಆಂಕರಿಂಗ್ ಕೂಡ ಬಿಟ್ಟಿದ್ದೇನೆ. 2020 ಪೂರ್ತಿ ಸಿನಿಮಾಗೇ ಮೀಸಲು. ಹಾಗಂತ ಏನನ್ನೂ ಪ್ಲಾ್ಯನ್ ಮಾಡಿಲ್ಲ, ಆದರೆ ಈ ವರ್ಷ ಒಂದೊಳ್ಳೆಯ ಕಮರ್ಷಿಯಲ್ ಸಿನಿಮಾದ ನಿರೀಕ್ಷೆಯಲ್ಲಿದ್ದೇನೆ’ ಎಂದರು ಅನುಪಮಾ. ವಿಶೇಷವೆಂದರೆ, ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ತೆರೆ ಕಾಣುವ ಮೂಲಕ ಅನುಪಮಾ 2020ರ ತಮ್ಮ ಖಾತೆ ತೆರೆದಿದ್ದಾರೆ. ‘ಈ ವರ್ಷದಲ್ಲಿ ಇದು ನನ್ನ ಮೊದಲ ಸಿನಿಮಾ. ಇದು ಮಹಿಳಾ ಪ್ರಧಾನ ಸಿನಿಮಾ. 2020ರಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಮತ್ತಷ್ಟು ಸಿಗಲಿ’ ಎಂಬ ಬಯಕೆ ಅವರದು. ‘ಈ ಸಿನಿಮಾದಲ್ಲಿ ನನ್ನದು ಡಿ-ಗ್ಲಾಮರಸ್ ಪಾತ್ರ. ಅದರಲ್ಲೂ ನಾನು ಮಾಡಿರುವ ಸಿನಿಮಾಗಳಲ್ಲಿ ಜಾಸ್ತಿ ಕಾಣಿಸಿಕೊಂಡಿದ್ದು ಡಿ-ಗ್ಲಾಮರಸ್ ಪಾತ್ರಗಳಲ್ಲೇ. ನನಗೆ ಡಿ-ಗ್ಲಾಮ್ ಪಾತ್ರಗಳ ಬಗ್ಗೆ ಬೇಸರವೇನೂ ಇಲ್ಲ. ಪಾತ್ರ ಯಾವುದಿದ್ದರೂ ಅದರಲ್ಲಿ ಪರ್ಫಾಮೆನ್ಸ್ಗೆ ಅವಕಾಶವಿರಬೇಕು. ಅಂಥ ಪಾತ್ರಗಳಲ್ಲೇ ನಾನು ನಟಿಸುತ್ತಿದ್ದೇನೆ. ಆದರೆ ಕೆಲವರು ನನಗೆ ಗ್ಲಾಮರಸ್ ಪಾತ್ರ ಆಗಲ್ಲ ಎಂಬಂತೆ ಮಾತನಾಡಿದ್ದನ್ನು ಕೇಳಿದ್ದೇನೆ. ಅದಕ್ಕಾಗಿಯಾದರೂ ಈ ವರ್ಷ ಒಂದು ಗ್ಲಾಮರಸ್ ಪಾತ್ರ ಇರುವ ಕಮರ್ಷಿಯಲ್ ಸಿನಿಮಾದಲ್ಲಿ ಅಭಿನಯಿಸಬೇಕು ಅಂತ ಅಂದುಕೊಂಡಿದ್ದೇನೆ’ ಎಂದು ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು ಅನುಪಮಾ.
ಇನ್ನು ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾಗೆ ಒಪ್ಪಿಕೊಳ್ಳುವ ಸಂದರ್ಭ ಅನುಪಮಾಗೆ ಸಣ್ಣ ಅಳುಕಿತ್ತಂತೆ, ಅದೂ ಚಿತ್ರದ ಟೈಟಲ್ ಕಾರಣಕ್ಕೆ. ‘ಬೆಂಕಿಯಲ್ಲಿ ಅರಳಿದ ಹೂವು ಒಂದು ಲೆಜೆಂಡ್ ಸಿನಿಮಾ. ನಾವೂ ಅದೇ ಟೈಟಲ್ನಲ್ಲಿ ಸಿನಿಮಾ ಮಾಡಿದಾಗ ಜನ ಅದೇ ನಿರೀಕ್ಷೆಯಿಂದ ನೋಡುವ ಜತೆಗೆ ಆ ಸಿನಿಮಾಗೆ ಹೋಲಿಸುವ ಸಾಧ್ಯತೆಯೂ ಇರುತ್ತದೆ. ಆದರೆ ಈ ಚಿತ್ರಕ್ಕೂ ಆ ಚಿತ್ರಕ್ಕೂ ಯಾವುದೇ ಹೋಲಿಕೆ ಇರದ ಕಾರಣ ಆಮೇಲೆ ನಿರಾಳವಾಗಿ ಒಪ್ಪಿದೆ’ ಎನ್ನುತ್ತಾರೆ ಅವರು.
ಅಂದಹಾಗೆ ಈ ಸಿನಿಮಾದಲ್ಲಿ ಗಾರ್ವೆಂಟ್ನಲ್ಲಿ ಕೆಲಸ ಮಾಡುವ ಮಹಿಳೆಯೇ ‘ಬೆಂಕಿಯಲ್ಲಿ ಅರಳಿದ ಹೂವು’. ಅವರು ಅನುಭವಿಸುವ ದೈನಂದಿನ ಸಂಕಷ್ಟಗಳೇ ಕಥಾವಸ್ತು. ಅಂಥ ಹಲವು ನೈಜ ಸಂಕಷ್ಟಗಳ ಸಂಕಲನವೇ ಕಥಾಹಂದರ. ಅವೆಲ್ಲದರ ಪ್ರತೀಕವಾಗಿ ಕಾಣಿಸಿಕೊಳ್ಳುವ ನಾಯಕಿಯ ಪಾತ್ರವನ್ನು ಅನುಪಮಾ ಮಾಡಿದ್ದಾರೆ. ‘ನಮ್ಮ ತಾಯಿಯೂ ಗಾರ್ವೆಂಟ್ಸ್ನಲ್ಲಿ ಕೆಲಸ ಮಾಡಿದ್ದರು. ಅಲ್ಲಿನ ಕಷ್ಟಗಳ ಪರಿಚಯ ನನಗಿದೆ. ಹೀಗಾಗಿ ಈ ಪಾತ್ರ ನನಗೆ ತುಂಬ ಹತ್ತಿರ ಅನಿಸುವಂಥದ್ದು’ ಎನ್ನುವ ಅನುಪಮಾ, ಚಿತ್ರತಂಡ ಕೂಡ ಒಂದು ಕುಟುಂಬದ ರೀತಿ ಅನಿಸಿತು ಎಂಬುದಾಗಿಯೂ ಹೇಳುತ್ತಾರೆ. ‘ಇದೇ ಮೊದಲ ಸಲ ನಿರ್ದೇಶನ ಮಾಡಿರುವ ದೇವಿ ಶ್ರೀಪ್ರಸಾದ್ ಅವರು ತುಂಬ ಸೆನ್ಸಿಬಲ್ ವ್ಯಕ್ತಿ. ಇನ್ನು ನಿರ್ವಪಕ ವಿಶು ಆಚಾರ್ ಇಲ್ಲಿ ಹೀರೋ ಕೂಡ. ಅವರ ಮಗಳೇ ಇಲ್ಲಿ ಸಿನಿಮಾದಲ್ಲಿ ನನ್ನ ಮಗಳಾಗಿ ಕಾಣಿಸಿಕೊಂಡಿದ್ದಾಳೆ. ಅದರಲ್ಲೂ ಎಲ್ಲರೂ ಒಂದು ಕುಟುಂಬ ರೀತಿ ಇದ್ದಿದ್ದರಿಂದ ಶೂಟಿಂಗ್ ಮುಗಿದಿದ್ದೇ ಗೊತ್ತಾಗಲಿಲ್ಲ’ ಎನ್ನುತ್ತಾರೆ ಅನುಪಮಾ.
‘ಯಾವ ಪಾತ್ರಕ್ಕೂ ತಯಾರಿ ನಡೆಸಬಾರದು, ಸ್ಕ್ರಿಪ್ಟ್ ಹಾಗೂ ಸಿಚ್ಯುವೇಷನ್ಗೆ ತಕ್ಕಂತೆ ಅಭಿನಯಿಸಬೇಕು’ ಎಂದು ನನಗೆ ನಿರ್ದೇಶಕರೊಬ್ಬರು ಹೇಳಿದ್ದಾರೆ. ಈ ನಿರ್ದೇಶಕರೂ ಅದನ್ನೇ ಹೇಳಿದ್ದರು. ನನ್ನ ಎಲ್ಲ ಸಿನಿಮಾದಲ್ಲೂ ನಾನು ಹಾಗೇ ಮಾಡುತ್ತಿದ್ದೇನೆ. | ಅನುಪಮಾ ನಟಿ
| ರವಿಕಾಂತ ಕುಂದಾಪುರ