Anupam Kher : ತಮ್ಮ ಅದ್ಭುತ ನಟನೆ ಮತ್ತು ಪ್ರಾಮಾಣಿಕ ಚಿಂತನೆಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ ಜೀವನದ ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತಮ್ಮ ಪತ್ನಿ ಕಿರಣ್ ಖೇರ್ ಗರ್ಭ ಧರಿಸಲು ಸಾಧ್ಯವಾಗದ ಕಾರಣದಿಂದಾಗಿ ಮಲಮಗನನ್ನು ಸ್ವಂತ ಮಗನಂತೆ ಅಪ್ಪಿಕೊಂಡ ಅನುಮಪ್ ಖೇರ್, ಇದೀಗ ಸ್ವಂತ ಮಗ ಇಲ್ಲದಿರುವ ಕೊರತೆಯನ್ನು ಅನುಭವಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಪತ್ನಿ ಕಿರಣ್ ಜತೆಗಿನ ಬಾಂಧವ್ಯದಿಂದ ಹಿಡಿದು ಸ್ವಂತ ಮಕ್ಕಳಿಲ್ಲದ ಕಾರಣದವರೆಗೆ ಹಾಗೂ ಪಾಲಕರ ಬಗ್ಗೆ ತಮಗಿರುವ ದೃಷ್ಟಿಕೋನವನ್ನು ಅನುಪಮ್ ಖೇರ್ ಅವರು ತೆರೆದಿಟ್ಟಿದ್ದಾರೆ.
ಇತ್ತೀಚೆಗೆ ಉದ್ಯಮಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಹಿರಿಯ ನಟ ಅನುಪಮ್ ಖೇರ್ ಮುಕ್ತವಾಗಿ ಮಾತನಾಡಿದ್ದಾರೆ. ಸ್ವಂತ ಮಕ್ಕಳು ಇಲ್ಲದಿರುವ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಅವರು ಆರಂಭದಲ್ಲಿ ಅದರ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲವಾದರೂ, 60 ವರ್ಷ ತುಂಬಿದ ನಂತರ ಏನೋ ಕಾಣೆಯಾಗಿದೆ ಎಂಬ ಭಾವನೆ ಮೂಡಲು ಪ್ರಾರಂಭಿಸಿತು ಎಂದು ಒಪ್ಪಿಕೊಂಡಿದ್ದಾರೆ.
ಈ ಹಿಂದೆ ದೂರದರ್ಶನದಲ್ಲಿ ಕೆಲಸ ಮಾಡುವ ಸಮಯದಲ್ಲಿ ಆಗಾಗ ಮಕ್ಕಳೊಂದಿಗೆ ನಡೆಸುತ್ತಿದ್ದ ಸಂವಹನವು ಅವರಿಗೆ ಸ್ವಂತ ಮಕ್ಕಳಿಲ್ಲದಿರುವ ಅನುಪಸ್ಥಿತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿತು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಾಗ ಪಾಲಕರ ಸ್ಥಾನವನ್ನು ನೇರವಾಗಿ ಅನುಭವಿಸದಿರುವ ಶಾಂತ ಶೂನ್ಯತೆ ಕಾಡಿತು ಎಂದು ಅನುಪಮ್ ಖೇರ್ ಬಹಿರಂಗಪಡಿಸಿದ್ದಾರೆ.
ಸ್ವಂತ ಮಕ್ಕಳು ಏಕಿಲ್ಲ ಎಂದು ಅನುಪಮ್ ಖೇರ್ ಅವರನ್ನು ಪ್ರಶ್ನಿಸಿದಾಗ, ಪತ್ನಿ ಕಿರಣ್ ಗರ್ಭಧಾರಣೆಯಲ್ಲಿ ತೊಂದರೆಗಳನ್ನು ಎದುರಿಸಿದರು ಎಂದು ಬಹಿರಂಗಪಡಿಸಿದರು. ನಾವು ಪ್ರಯತ್ನಿಸಿದರು ಕೂಡ ಗರ್ಭಧಾರಣೆಯು ನಿರೀಕ್ಷೆಯಂತೆ ಪ್ರಗತಿಯಾಗಲಿಲ್ಲ. ಅಲ್ಲದೆ, ಈ ಅವಧಿಯಲ್ಲಿ ನಾನು ವೃತ್ತಿಜೀವನ ನಿರ್ಮಿಸುವತ್ತ ಹೆಚ್ಚು ಗಮನಹರಿಸಿದೆ. ನಾನು ಕಿರಣ್ ಅವರನ್ನು ಮದುವೆಯಾದಾಗ ಅವರ ಮಗ ಸಿಕಂದರ್ (ಮೊದಲ ಗಂಡನ ಮಗ)ಗೆ ಕೇವಲ ನಾಲ್ಕು ವರ್ಷ. ಹೀಗಾಗಿ ಆತ ಸ್ವಾಭಾವಿಕವಾಗಿಯೇ ತನ್ನ ಜೀವನದ ಒಂದು ಭಾಗವಾದನು. ವರ್ಷಗಳು ಕಳೆದಂತೆ ನಮ್ಮಿಬ್ಬರಲ್ಲಿ ಬಲವಾದ ಬಾಂಧವ್ಯ ಬೆಳೆಯಿತು. ಸಿಕಂದರ್ ನನ್ನ ಹೃದಯದಲ್ಲಿ ಮಗನ ಜಾಗವನ್ನು ತುಂಬಿದ್ದರಿಂದ ಏನೋ ಕಾಣೆಯಾಗಿದೆ ಎಂಬ ಭಾವನೆ ಮೂಡಲಿಲ್ಲ ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಕಾಲಗಳು ಕಳೆದಂತೆ ತನ್ನ ಭಾವನೆಗಳಲ್ಲಾದ ವಿಕಸನದ ಬಗ್ಗೆ ಇದೇ ಸಂದರ್ಭದಲ್ಲಿ ಅನುಪಮ್ ಖೇರ್ ಮಾತನಾಡಿದರು. ಈ ಮೊದಲು ಸ್ವಂತ ಮಗುವಿನ ಅನುಪಸ್ಥಿತಿಯನ್ನು ಅನುಭವಿಸದಿದ್ದರೂ, ಈಗ ಅದು ಕಾಡುತ್ತಿದೆ ಎಂದು ಒಪ್ಪಿಕೊಂಡರು. ಮಗುವೊಂದು ಬೆಳೆಯುವುದನ್ನು ನೋಡುವುದರಲ್ಲಿ ಮತ್ತು ಆರಂಭದಿಂದಲೇ ಆ ಬಾಂಧವ್ಯವನ್ನು ನಿರ್ಮಿಸುವುದರಲ್ಲಿ ಒಂದು ಅನನ್ಯ ಸಂತೋಷವಿದೆ. ಇದನ್ನು ಯೋಚಿಸಿದಾಗಲೆಲ್ಲ ಏನೋ ಭಾವನೆ ಕಾಡುತ್ತದೆ. ಆದರೆ, ಇದು ನನ್ನ ಜೀವನದಲ್ಲಿ ವಿಷಾದ ಅಥವಾ ದುರಂತವೇನಲ್ಲ, ಆದರೆ ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ ಬರುವ ಒಂದು ಆಲೋಚನೆ. ಸ್ವಂತ ಮಗುವನ್ನು ಬೆಳೆಸುವುದು ಒಂದು ಸುಂದರ ಅನುಭವವಾಗುತ್ತಿತ್ತು ಎನ್ನುವ ಮೂಲಕ ಅನುಪಮ್ ಖೇರ್ ಅವರು ಸ್ವಂತ ಮಗುವಿನ ಕೊರತೆ ಕಾಡುತ್ತಿದೆ ಎಂಬುದನ್ನು ಒಪ್ಪಿಕೊಂಡರು. (ಏಜೆನ್ಸೀಸ್)