ಬೆಂಗಳೂರು: ಕನ್ನಡದಲ್ಲಿ ಸೈಕೋ ಕಿಲ್ಲರ್ಗಳ ಕುರಿತಾದ ಹಲವು ಕಥೆಗಳ ಬಂದಿವೆ. ಈಗ ಆ ಸಾಲಿಗೆ 'ದ್ವಿಪಾತ್ರ' ಎಂಬ ಹೊಸ ಚಿತ್ರವೂ ಸೇರಿದೆ. ವಿಶೇಷವೆಂದರೆ, ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ.
ಈ ಚಿತ್ರವನ್ನು ನಿರ್ದೇಶಿಸಿರುವುದು ಶ್ರೀವತ್ಸ ಆರ್. ಮೂಲತಃ ಅವರೊಬ್ಬ ಚಾರ್ಟರ್ಡ್ ಅಕೌಂಟೆಂಟ್ ಅಂತೆ. ಆದರೆ, ಸಿನಿಮಾ ಬಗ್ಗೆ ಆಸಕ್ತಿ ಇದ್ದ ಕಾರಣ, ಅವರು ಚಿತ್ರರಂಗದತ್ತ ಬಂದಿದ್ದಾರೆ. ೨೦೧೬ರಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಡಬಲ್ ಡಿಎನ್‌ಎ ಮನುಷ್ಯನಿಗಿದ್ದರೆ ಏನಾಗುತ್ತದೆ, ಆತನೊಬ್ಬ ಸೈಕೋಕಿಲ್ಲರ್ ಆದರೆ ಹೇಗಿರುತ್ತದೆ ಎಂಬ ವಿಷಯಗಳನ್ನಿಟ್ಟುಕೊಂಡು ಅವರು ಈ ಚಿತ್ರದ ಕಥೆ ಮಾಡಿದ್ದಾರಂತೆ. ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು, ಈ ಚಿತ್ರಕ್ಕೆ ಬಿಜಿಎಂ ದೊಡ್ಡ ಶಕ್ತಿ. ಚಿತ್ರಕಥೆ ತುಂಬಾ ಫಾಸ್ಟಾಗಿದ್ದು, ಕ್ಷಣ ಮಿಸ್ ಆದರೂ ಲಿಂಕ್ ತಪ್ಪಿಹೋಗುತ್ತದೆ' ಎನ್ನುತ್ತಾರೆ.
'ಲಕ್ಷ್ಮೀ ಬಾರಮ್ಮ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಚಂದು ಗೌಡ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. 'ಸೀರಿಯಲ್ ಕಿಲ್ಲರ್ ಒಬ್ಬ ಹೆಣ್ಣುಮಕ್ಕಳನ್ನು ಕೊಲೆ ಮಾಡುತ್ತಿರುತ್ತಾನೆ, ಆತ ಏಕೆ ಮತ್ತು ಹೇಗೆ ಕೊಲೆಗಾರನಾದ ಎಂಬ ಕಾರಣವನ್ನು ಕಂಡುಹಿಡಿಯುವ ಡಿಸಿಪಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ' ಎಂದು ಹೇಳುತ್ತಾರೆ.
ಚಿತ್ರದಲ್ಲಿ ನಾಯಕಿಯರಾಗಿ ಪಾಯಲ್ ಚಂಗಪ್ಪ ಮತ್ತು ಸ್ನೇಹ ಹೆಗಡೆ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಹಿರಿಯ ನಟ ಅವಿನಾಶ್, ನೀನಾಸಂ ಅಶ್ವಥ್, ಮಾಳವಿಕಾ ಅವಿನಾಶ್, ವಿಕ್ಕಿ ಕೋಲಾರ, ಸತ್ಯ, 'ಬಿಗ್ ಬಾಸ್' ರಘುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,
'ದ್ವಿಪಾತ್ರ' ಚಿತ್ರಕ್ಕೆ ಮಹರಾಜ್ ಸಂಗೀತ ಸಂಯೋಜಿಸಿದ್ದು, ಸತ್ಯಾಶ್ರಯ ನಿರ್ಮಾಣ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರಾರಂಭವಾದ ಈ ಚಿತ್ರವು ಇದೀಗ ಮುಕ್ತಾಯದ ಹಂತಕ್ಕೆ ತಲುಪಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.