ಸಿನಿವಾಣಿ

ಸಿಎಂ ಅಭಿಮಾನಿ ಅನೂಪ್ ರೇವಣ್ಣ : ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಹೊಸ ಸಿನಿಮಾ ‘ಕನಕರಾಜ’

ಬೆಂಗಳೂರು : ‘ಲಕ್ಷ್ಮಣ’, ‘ನಾ ಪಂಟ ಕಣೋ, ‘ಹೈಡ್ ಆ್ಯಂಡ್ ಸೀಕ್’ ಬಳಿಕ ಅನೂಪ್ ರೇವಣ್ಣ ನಟಿಸುತ್ತಿರುವ ಸಿನಿಮಾ ‘ಕನಕರಾಜ’. ಇದೊಂದು ಸಾಮಾಜಿಕ ಚಿತ್ರವಾಗಿದ್ದು, ಇಲ್ಲಿ ಅನೂಪ್ ರೇವಣ್ಣ ಯುವರಾಜಕಾರಣಿ ಜತೆಗೆ ಸಿಎಂ ಸಿದ್ದರಾಮಯ್ಯ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಚಿತ್ರದ ಶೀರ್ಷಿಕೆಗೆ ´ಫ್ಯಾನ್​ ಆಫ್​ ಸಿಎಂ’ ಎಂಬ ಅಡಿಬರಹವಿದೆ. ಇತ್ತೀಚೆಗಷ್ಟೆ ಮುಹೂರ್ತ ನೆರವೇರಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಆರಂಭ ಲಕ ತೋರಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ವಿ.ಎಂ.ರಾಜು ಮತ್ತು ನೀಲ್ ಕೆಂಗಾಪುರ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಸಾಮಾನ್ಯವಾಗಿ ಯುವಕರು ರಾಜಕೀಯಕ್ಕೆ ಬರಬೇಕು ಎಂದು ಹೇಳುತ್ತಿರುತ್ತೇವೆ. ಅದನ್ನೇ ಪ್ರಮುಖವಾಗಿಟ್ಟಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ನಾಯಕ ವಕೀಲನಾಗಿದ್ದರೂ ರಾಜಕೀಯದಲ್ಲಿ ಸಕ್ರಿಯ. ಜತೆಗೆ ಮುಖ್ಯಮಂತ್ರಿಗಳ ಅಭಿಮಾನಿಯೂ ಹೌದು’ ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ಚಿತ್ರದ ಬಗ್ಗೆ ವಿವರಿಸಿದರು. ಬೆಂಗಳೂರು, ಮಂಗಳೂರು, ಪರರಾಜ್ಯ ಸೇರಿ ವಿದೇಶದಲ್ಲೂ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇಲ್ಲಿ ಅನೂಪ್ ರೇವಣ್ಣಗೆ ನಿಮಿಷಾ ಜೋಡಿಯಾಗಿದ್ದಾರೆ. ಉಳಿದಂತೆ ರಮೇಶ್ ಕೊಯಿರಾ ಛಾಯಾಗ್ರಹಣ, ಲಕ್ಷ್ಮಣ ರೆಡ್ಡಿ ಸಂಕಲನ ಚಿತ್ರಕ್ಕಿರಲಿದೆ.