ಬೆಂಗಳೂರು: ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ನಟಿಯಾಗಿ ಗುರುತಿಸಿಕೊಂಡವರು ನಟಿ ಅಂಕಿತಾ ಅಮರ್. ಈ ಮೊದಲು ಕಿರುತೆರೆಯಲ್ಲಿ ಮಿಂಚಿದ್ದ ಅವರು ಇದೀಗ ಬೆಳ್ಳಿತೆರೆಯಲ್ಲೂ ಸದ್ದು ಮಾಡುತ್ತಿದ್ದಾರೆ. ಕನ್ನಡದ ಬಹುನಿರೀಕ್ಷೆಯ ಹಾಗೂ ಖ್ಯಾತ ನಟರ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರ ಎರಡು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಅದರಲ್ಲಿ ಸಿ.ಆರ್.ಬಾಬಿ ನಿರ್ದೇಶನದ ಹಾಗೂ ಶೈನ್ ಶೆಟ್ಟಿಗೆ ಜೊಡಿಯಾಗಿರುವ ‘ಜಸ್ಟ್ ಮ್ಯಾರೀಡ್’ ಸಿನಿಮಾ ಇದೇ ಶುಕ್ರವಾರ (ಆ.22) ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪಾತ್ರ ಹಾಗೂ ಜರ್ನಿ ಕುರಿತು ಅಂಕಿತಾ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ನನ್ನ ಹಿಂದಿನ ‘ಇಬ್ಬನಿ ತಬ್ಬಿದ ಇಳೆಯಲಿ’ ಟೀಸರ್ ನೋಡಿದ್ದ ಬಾಬಿ, ಮುಖದಲ್ಲಿ ಒಳ್ಳೆಯ ಕಳೆ ಇದೆ. ಹಾಗಾಗಿ, ಈ ಪಾತ್ರಕ್ಕೆ ಒಪ್ಪುತ್ತೀಯಾ ಎಂದು ಅವರೇ ಆಯ್ಕೆ ಮಾಡಿಕೊಂಡರು. ಇಲ್ಲಿ ನನ್ನದು ಸಹನಾ ಎಂಬ ಪಾತ್ರ. ಕನಸಿನ ಬೆನ್ನಹಿಂದೆ ಹೊರಟರೇ ಅವಳು ಸಹನಾಶೀಲಳು. ಆದರೆ, ಚಿಕ್ಕ ಪುಟ್ಟ ವಿಚಾರಗಳಿಗೆ ಅಸಹನೀಯಳಾಗುತ್ತಾಳೆ. ಅದೇ ವಿಚಾರಗಳು ಅವಳನ್ನು ಒಂದು ಪರಿಸ್ಥಿತಿಗೆ ತಂದು ನಿಲ್ಲಿಸುತ್ತದೆ. ಇಲ್ಲಿ ಫ್ಯಾಮಿಲಿ ಡ್ರಾಮಾ, ಆ್ಯಕ್ಷನ್-ರೊಮ್ಯಾಂಟಿಕ್ ಹಾಗೂ ರಾಜಕೀಯ ದಂಗಲ್ ಈ ಚಿತ್ರದ ಪ್ರಮುಖ ಅಂಶಗಳು. ಇಲ್ಲಿ ಮತ್ತು ಶೈನ್ ಶೆಟ್ಟಿ ಮಾತ್ರ ಪ್ರಮುಖ ಪಾತ್ರವಲ್ಲ. ಇಲ್ಲಿ ಹಲವು ವ್ಯಕ್ತಿಗಳು ಬಂದು ಹೋಗುತ್ತಾರೆ. ಅವರಿಂದ ಒಂದೊಂದೇ ಸಂದೇಶವಿದೆ. ಅಷ್ಟು ಚೆನ್ನಾಗಿ ನಿರ್ದೇಶಕಿ ಬಾಬಿ ಕಥೆ ಹೆಣೆದಿದ್ದಾರೆ. ಮನಸ್ಸಿಗೆ ಗಾಢವಾದ ಪರಿಣಾಮ ಬೀರುವ ಅಂಶಗಳಿಗಿಂತ ಇಡೀ ಕುಟುಂಬ ಕೂತು ಸಿನಿಮಾ ನೋಡುವಂತಹ ವಾತಾವರಣ ಈ ಚಿತ್ರದ ಕಥೆಯಲ್ಲಿದೆ’ ಎಂದು ಮಾಹಿತಿ ನೀಡುತ್ತಾರೆ.
‘ಭಾರ್ಗವ’ ಮೊದಲ ಹಂತ ಪೂರ್ಣ
ಅಂಕಿತಾ ಅಮರ್ ‘ಜಸ್ಟ್ ಮ್ಯಾರೀಡ್’ ಬಳಿಕ ಉಪೇಂದ್ರ ಅಭಿನಯದ ‘ಭಾರ್ಗವ’ ಚಿತ್ರದಲ್ಲಿ ಶೂಟಿಂಗ್‌ನಲ್ಲಿ ಬಿಜಿಯಾಗಲಿದ್ದಾರೆ.‘‘ಭಾರ್ಗವ’ ಪಾತ್ರದ ಬಗ್ಗೆ ಈಗಲೇ ಮಾಹಿತಿ ಹಂಚಿಕೊಳ್ಳುವಂತಿಲ್ಲ. ನನ್ನ ವೃತ್ತಿ ಜೀವನದಲ್ಲಿ ಒಳ್ಳೆಯ ಪಾತ್ರವಾಗಲಿದೆ. ಉಪೇಂದ್ರ ಅವರಂತಹ ದಿಗ್ಗಜ ನಟರ ಜತೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವುದೇ ದೊಡ್ಡ ಸಂಗತಿ. ಈಗಾಗಲೇ ಒಂದು ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಸದ್ಯದಲ್ಲಿ ಎರಡನೇ ಹಂತದ ಶೂಟಿಂಗ್ ಆರಂಭವಾಗಲಿದೆ. ನನ್ನ ಕಣ್ಣುಗಳ ಬಗ್ಗೆ ಉಪೇಂದ್ರ ಸರ್ ಮೆಚ್ಚುಗೆ ಮಾತನಾಡಿದ್ದು ತುಂಬಾ ಖುಷಿ ನೀಡಿದೆ’ ಎಂದು ಮಾಹಿತಿ ಹಂಚಿಕೊಂಡರು. ಇನ್ನು ಅಂಕಿತಾ ಅಮರ್, ನಿರೂಪ್ ಭಂಡಾರಿಗೆ ನಾಯಕಿಯಾಗಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಕನ್ನಡ ಸಿನಿಮಾಕ್ಕೆ ಸಹಿ ಮಾಡಿರುವ ಅಂಕಿತಾ ಆ ಪಾತ್ರಕ್ಕಾಗಿ ಸಿದ್ಧತೆ ನಡೆಸಿದ್ದಾರೆ.