ಬೆಂಗಳೂರು: ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ನಟಿಸುವುದರ ಜತೆಗೆ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋದಲ್ಲಿ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ ಅಂಕಿತಾ ಅಮರ್. ಇದೀಗ ಅವರು ಗಾಯಕಿಯಾಗಿಯೂ ಬಡ್ತಿ ಪಡೆದಿದ್ದಾರೆ. ಇನ್ನೇನು ಇದೇ ತಿಂಗಳ 30ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ. ಆ ಹಬ್ಬದ ಪ್ರಯುಕ್ತ ‘ಒಲಿದು ಬಾರಾ ಕೃಷ್ಣ ...’ ಎಂಬ ಹಾಡು ಯೂಟ್ಯೂಬ್ನ ಡಿವೋ ಚಾನಲ್ನಲ್ಲಿ ಬಿಡುಗಡೆ ಆಗುತ್ತಿದೆ.
ಮೈಸೂರಿನ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ಶಾಲೆಯಲ್ಲಿ ಸುನೀತಾ ಚಂದ್ರಕುಮಾರ್ ಅವರ ಬಳಿ ಮೂರು ವರ್ಷ ಸಂಗೀತ ಕಲಿತಿರುವ ಅಂಕಿತಾ, ಈ ಹಿಂದೆ ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದರೂ, ರೆಕಾರ್ಡಿಂಗ್ ಮಾಡಿರಲಿಲ್ಲ. ಇದೀಗ ಅದೇ ಶಾಲೆಯ ಮತ್ತೋರ್ವ ಸಂಗೀತ ವಿದ್ಯಾರ್ಥಿನಿ ಸಿಂಚನಾ ಚಂದನ್ ಜತೆ ಸೇರಿ ‘ಒಲಿದು ಬಾರಾ ಕೃಷ್ಣ ’ ಹಾಡಿಗೆ ಇಬ್ಬರೂ ಧ್ವನಿಯಾಗಿದ್ದಾರೆ.
ಈ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ ಅಂಕಿತಾ, ‘ಹಾಡುವ ಹವ್ಯಾಸ ಮೊದಲಿನಿಂದಲೂ ಇತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ರೆಕಾರ್ಡಿಂಗ್ ಮಾಡಿರಲಿಲ್ಲ. ಇದೀಗ ಕೃಷ್ಣನ ಹಾಡಿನ ಮೂಲಕ ಅದು ಈಡೇರುತ್ತಿದೆ. ಜನ್ಮಾಷ್ಟಮಿ ಪ್ರಯುಕ್ತ ಬಿಡುಗಡೆ ಆಗುತ್ತಿದೆ’ ಎನ್ನುತ್ತಾರೆ.