ಸಿನಿವಾಣಿ

ಅರ್ಜುನ್ - ಮಲೈಕಾ ರಿಲೇಷನ್​ಶಿಪ್​ ಬಗ್ಗೆ ಚಿಕ್ಕಪ್ಪ ಅನಿಲ್​ ಕಪೂರ್​ ಹೇಳುವುದೇನು?

ಕಳೆದೊಂದು ವರ್ಷದಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಬಾಲಿವುಡ್​ನ ಅರ್ಜುನ್​ ಕಪೂರ್ ಮತ್ತು ಮಲೈಕಾ ಅರೊರಾ, ಇತ್ತೀಚೆಗಷ್ಟೇ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಮಲೈಕಾ ಕುಟುಂಬ ಕಾರ್ಯಕ್ರಮಗಳಿಗೆ ಅರ್ಜುನ್​ಗೆ ಆಹ್ವಾನ ನೀಡಿ, ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ನಡೆಯುತ್ತಿದ್ದಂತೆ, ಈ ಸಂಬಂಧದ ಬಗ್ಗೆ ಮಲೈಕಾ ಫ್ಯಾಮಿಲಿಯಿಂದ ಯಾವುದೇ ತಕರಾರಿಲ್ಲ ಎಂಬುದು ಅಧಿಕೃತವಾಯ್ತು. ಇತ್ತ ಕಪೂರ್ ಖಾಂದಾನ್​ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ಅರ್ಜುನ್​ ಕಪೂರ್​ ಚಿಕ್ಕಪ್ಪ ಅನಿಲ್​ ಕಪೂರ್​ ಇವರಿಬ್ಬರ ರಿಲೇಷನ್​ಶಿಪ್​ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ಈ ಜೋಡಿ ಹಕ್ಕಿಯ ಬಗ್ಗೆ ಚಾಟ್​ ಶೋವೊಂದರಲ್ಲಿ ಕೇಳಿದ ಪ್ರಶ್ನೆಗೆ ಅನಿಲ್​ ಕಪೂರ್​ ಉತ್ತರಿಸಿದ್ದಾರೆ. ‘ನನಗೆ ಅರ್ಜುನ್​ ಗೊತ್ತು. ಅವನಿಗೆ ಯಾವುದು ಸಂತೋಷ ಅನಿಸುತ್ತದೋ ಅದನ್ನೇ ಮಾಡಲಿ. ಅದರಲ್ಲೇ ಆತ ಹ್ಯಾಪಿಯಾಗಿರುತ್ತಾನೆಂದರೆ ನಮ್ಮದೇನೂ ತಕರಾರಿಲ್ಲ. ನಮ್ಮ ಕುಟುಂಬ ಬಯಸುವುದೂ ಅದನ್ನೇ ಅವರವರ ಸಂತೋಷವೇ ನಮಗೆ ಮುಖ್ಯ’ ಎಂದಿದ್ದಾರೆ.

ಲಾಕ್​ಡೌನ್​ ಶುರುವಾಗುವುದಕ್ಕೂ ಮುನ್ನ ಎಲ್ಲೆಂದರಲ್ಲಿ ಕಾಣಿಸಿಕೊಂಡು, ಎಲ್ಲರ ಅಟೆಂನ್ಷನ್​ ಗಿಟ್ಟಿಸಿಕೊಳ್ಳುತ್ತಿದ್ದ ಈ ಜೋಡಿ, ವಿದೇಶಿ ಪ್ರವಾಸ, ಸುತ್ತಾಟ, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುತ್ತಿತ್ತು. ಇದೀಗ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಇಬ್ಬರೂ ಅವರವರ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕರೊನಾ ಮುಗಿಯುತ್ತಿದ್ದಂತೆ, ಮದುವೆ ಬಗ್ಗೆ ಈ ಜೋಡಿ ನಿರ್ಧರಿಸಬಹುದು. (ಏಜೆನ್ಸೀಸ್​)