ಸಿನಿವಾಣಿ

ANDONDITTU KAALA MOVIE REVIEW: ಸಿನಿಮಾ ನಾವಿಕನ ಸೋಲು-ಗೆಲುವಿನ ಕಥೆ

ಚಿತ್ರ: ಅಂದೊಂದಿತ್ತು ಕಾಲ

ನಿರ್ದೇಶನ: ಕೀರ್ತಿ ಕೃಷ್ಣಪ್ಪ

ತಾರಾಗಣ: ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ಜಗ್ಗಪ್ಪ, ಕಡ್ಡಿಪುಡಿ ಚಂದ್ರು ಮತ್ತಿತರರು

ಶಿವ ಸ್ಥಾವರಮಠ

ಸಿನಿಮಾ ಸಮುದ್ರ ಪ್ರಯಾಣವಿದ್ದಂತೆ. ಸಮುದ್ರಯಾನದಲ್ಲಿ ಪ್ರಯಾಣಿಕರು ಕಡಲ ಸೌಂದರ್ಯವನ್ನು ಸವಿಯುತ್ತಿದ್ದರೆ, ನಾವಿಕ ಮಾತ್ರ ಎಲ್ಲ ಜವಾಬ್ದಾರಿ ಹೊತ್ತು ಸಾಗುತ್ತಾನೆ. ಸಿನಿಮಾದಲ್ಲಿ ನಿರ್ದೇಶಕನೇ ನಾವಿಕ. ತನ್ನ ಕನಸು ಹೊತ್ತು ಸಾಗುತ್ತಿರುತ್ತಾನೆ. ತಾನು ಅಂದುಕೊಂಡಂತೆ ಚಿತ್ರವನ್ನು ತೆರೆ ಮೇಲೆ ತರುತ್ತಾನೆ. ಆ ಸಿನಿಮಾದ ಸೋಲು-ಗೆಲುವಿಗೆ ಆತನೇ ಕಾರಣವಾಗಿರುತ್ತಾನೆ. ಇಂತಹ ನಿರ್ದೇಶಕನ ಬದುಕಿನ ಹೋರಾಟವನ್ನು ಡೈರೆಕ್ಟರ್ ಡೈರಿಯಂತೆ ಕೀರ್ತಿ ಕೃಷ್ಣಪ್ಪ ‘ಅಂದೊಂದಿತ್ತು ಕಾಲ’ದಲ್ಲಿ ಚಿತ್ರಿಸಿದ್ದಾರೆ. ಹಳ್ಳಿ ಹುಡುಗನೊಬ್ಬ ಸಿನಿಮಾ ಕನಸು ಕಂಡು ನಿರ್ದೇಶಕನಾಗುವ ಸುಮಧುರ, ಭಾವನಾತ್ಮಕ ಪಯಣ ಇದಾಗಿದೆ.

ಕುಮಾರ (ವಿನಯ್ ರಾಜಕುಮಾರ್) ಊರಿನ ಟೆಂಟ್‌ನಲ್ಲಿ ಪ್ರದರ್ಶನ ಕಂಡ ‘ರಂಗನಾಯಕಿ’ ಸಿನಿಮಾ ನೋಡಿ ನಿರ್ದೇಶಕನಾಗುವ ಕನಸು ಕಾಣುತ್ತಾನೆ. ಅದಕ್ಕಾಗಿ ಊರು ತೊರೆದು ಬೆಂಗಳೂರಿಗೆ ಬರುತ್ತಾನೆ. ಮೊದಲು ನೋವು, ಅವಮಾನ ಎದುರಿಸುತ್ತಾನೆ. ಆ ಸಮಯದಲ್ಲಿ ಆತನಿಗೆ ವಸುಂಧರ (ಅದಿತಿ) ಬೆನ್ನೆಲುಬಾಗಿ ನಿಲ್ಲುತ್ತಾಳೆ. ಕ್ರಮೇಣ ಸಂಭಾಷಣೆಕಾರನಾಗಿ ವೃತ್ತಿ ಜೀವನ ಆರಂಭಿಸಿ, ಕೊನೆಗೆ ಹಂತ ಹಂತವಾಗಿ ಹೇಗೆ ಬೆಳೆದು ಯಶಸ್ವಿ ನಿರ್ದೇಶಕನಾಗುತ್ತಾನೆ ಎಂಬುದೇ ಕಥೆ. ನಿರ್ದೇಶಕರು ಎದುರಿಸುವ ಅಸಹಾಯಕತೆಯನ್ನು ಇಲ್ಲಿ ಆಪ್ತವಾಗಿ ಚಿತ್ರಿಸಲಾಗಿದೆ. ನಿರ್ದೇಶಕ ಹೋರಾಟದ ಜತೆಗೆ ಪ್ರೀತಿ, ಸ್ನೇಹ ಹಾಗೂ ತಂದೆ-ತಾಯಿಯ ವಾತ್ಸಲ್ಯದ ಅಂಶಗಳಿರುವುದು ಕಥೆಯನ್ನು ವಿಸ್ತರಿಸಿದೆ. ವಿನಯ್ ರಾಜಕುಮಾರ್ ಕುಮಾರನಾಗಿ ಭಾವನಾತ್ಮಕವಾಗಿ ಪಯಣಿಸಿದ್ದಾರೆ. ನಿರ್ದೇಶಕನ ಅಸಹಾಯಕತೆಯನ್ನು ಕಣ್ಣಿನಲ್ಲಿಯೇ ನಟಿಸಿ, ತೋರಿಸಿದ್ದಾರೆ. ಅದಿತಿ ಪ್ರಭುದೇವ ಮುದ್ದಾಗಿ ನಟಿಸಿದ್ದಾರೆ. ನಿಶಾ ರವಿಕೃಷ್ಣನ್, ಕಡ್ಡಿಪುಡಿ ಚಂದ್ರು, ಜಗ್ಗಪ್ಪ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರವಿಚಂದ್ರನ್ ಪಾತ್ರ ವಿಶೇಷವಾಗಿದ್ದು, ಏನೆಂದು ತಿಳಿಯಲು ಸಿನಿಮಾ ನೋಡಬೇಕಷ್ಟೆ. ರಾಘವೇಂದ್ರ ಸಂಗೀತ ಕಥೆಯನ್ನು ಹಿಡಿದಿಟ್ಟುಕೊಂಡಿದೆ. ಅರಸು ಅಂತಾರೆ, ಕ್ರಾಂತಿಕುಮಾರ್, ಸಂತೋಷ್ ಸಂಭಾಷಣೆ ಇಷ್ಟವಾಗುತ್ತದೆ.

ರೇಟಿಂಗ್: 3