ಬೆಂಗಳೂರು: ಅನಂತ್ ನಾಗ್, ಲಕ್ಷ್ಮೀ ಜೋಡಿ 1970-80ರ ದಶಕದಲ್ಲಿ ಜನಪ್ರಿಯವಾಗಿತ್ತು. ಇಬ್ಬರೂ ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಮುದುಡಿದ ತಾವರೆ ಅರಳಿತು’ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಕೊನೆಯ ಚಿತ್ರ 1985ರ ‘ಸೇಡಿನ ಹಕ್ಕಿ’. ಆ ಬಳಿಕ ಅನಂತ್ ನಾಗ್ ಮತ್ತು ಲಕ್ಷ್ಮೀ ಮತ್ತೆ ತೆರೆ ಹಂಚಿಕೊಂಡಿರಲಿಲ್ಲ. ಇದೀಗ ನಾಲ್ಕು ದಶಕಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಹೌದು, ಶರಣ್ ಅಭಿನಯದ ‘ರಾಜದ್ರೋಹಿ’ ಚಿತ್ರದಲ್ಲಿ ನಾಯಕನ ತಂದೆ-ತಾಯಿಯಾಗಿ ಅನಂತ್ ನಾಗ್ ಮತ್ತು ಲಕ್ಷ್ಮೀ ಅಭಿನಯಿಸಿದ್ದಾರೆ. ಕೆಲ ವರ್ಷಗಳ ಹಿಂದೆಯೇ ಈ ಚಿತ್ರ ಸೆಟ್ಟೇರಿತ್ತು. ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಸಮರ್ಥ ರಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧ ಸಾರುವ ಕೌಟುಂಬಿಕ ಚಿತ್ರವಿದು. ಶರಣ್, ಅನಂತ್ ನಾಗ್, ಲಕ್ಷ್ಮೀ ಜತೆಗೆ ಅಭಿಜಿತ್, ಒರಟ ಪ್ರಶಾಂತ್, ನೀನಾಸಂ ಅಶ್ವತ್ಥ್, ಅಚ್ಯುತ್ ಕುಮಾರ್, ಕುರಿಬಾಂಡ್ ಸುನಿಲ್, ಬ್ಯಾಂಕ್ ಜನಾರ್ದನ್, ಪಟ್ರೆ ಅಜಿತ್, ಮಾನಸಿ, ಕುರಿ ಪ್ರತಾಪ್ ನಟಿಸಿದ್ದಾರೆ. ರಘು ತುಮಕೂರು ಸಂಗೀತ, ಸತೀಶ್ ಮನೋಹರ್, ವೀನಸ್ ಮೂರ್ತಿ, ನಾಗರಾಜ್ ಛಾಯಾಗ್ರಹಣ, ಕುಮಾರ್ ಕೊಟಿಕೊಪ್ಪ ಸಂಕಲನ ಚಿತ್ರಕ್ಕಿದೆ. ಸಿನಿಮಾ ಇದೇ ಆಗಸ್ಟ್‌ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.