ಸಿನಿವಾಣಿ

ಅಮೂಲ್ಯ ಕಮ್‌ಬ್ಯಾಕ್ : ‘ಪೀಕಬೂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ ಚೆಂದದ ಚೆಲುವೆ

ಬೆಂಗಳೂರು: ಮುಗ್ಧ ಹುಡುಗಿಯ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿರುವ ನಟಿ ಅಮೂಲ್ಯಗೆ ಭಾನುವಾರ ಡಬಲ್ ಸಂಭ್ರಮ. ಸೆ.14ರಂದು ಕುಟುಂಬದ ಜತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಮೂಲ್ಯ ಮಹತ್ವದ ಘೋಷಣೆ ಮಾಡಿದ್ದು, ಬಹು ವರ್ಷಗಳ ಬಳಿಕ ನಟನೆಗೆ ಮರಳುತ್ತಿದ್ದಾರೆ. ಹೌದು, ಹುಟ್ಟುಹಬ್ಬದ ದಿನವೇ ನಟಿ ಅಮೂಲ್ಯ ‘ಪೀಕಬೂ’ ಎಂಬ ಹೊಸ ಚಿತ್ರ ಘೋಷಿಸಿದ್ದಾರೆ. ಈ ಮೂಲಕ ಎಂಟು ವರ್ಷಗಳ ಬಳಿಕ ನಟಿ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ‘ಪೀಕಬೂ’ ಫ್ಯಾಮಿಲಿ ಎಂಟರ್‌ಟೈನಿಂಗ್‌ನ ಕಾಮಿಡಿ ಚಿತ್ರವಾಗಿದ್ದು, ಈ ಹಿಂದಿನ ವರ್ಚಸ್ಸು ಹಾಗೂ ಉತ್ಸಾಹದಲ್ಲಿಯೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನಟಿಯ ಫಸ್ಟ್‌ಲುಕ್ ರಿಲೀಸ್ ಮಾಡಲಾಗಿದ್ದು, ಅಮೂಲ್ಯ ಬೇಬಿ ಗರ್ಲ್ ತರ ಕಾಣಿಸಿಕೊಂಡಿದ್ದಾರೆ. ಅರಂಭದಲ್ಲಿ ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅಮೂಲ್ಯ 2007ರಲ್ಲಿ ತೆರೆಕಂಡಿದ್ದ ‘ಚೆಲುವಿನ ಚಿತ್ತಾರ’ ಮೂಲಕ ಪರಿಪೂರ್ಣ ನಾಯಕಿಯಾಗಿದ್ದರು. ಈ ಚಿತ್ರವು ಬಾಕ್ಸಾಪೀಸ್‌ನಲ್ಲಿ ಹಿಟ್ ಆಗುವುದಲ್ಲದೇ ಅಮೂಲ್ಯಗೆ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ‘ಚೈತ್ರದ ಚಂದ್ರಮ’, ‘ನಾನು ನನ್ನ ಕನಸು’, ‘ಶ್ರಾವಣಿ ಸುಬ್ರಹ್ಮಣ್ಯ’, ‘ಗಜಕೇಸರಿ’, ‘ರಾಮ್‌ಲೀಲಾ’ ಸೇರಿ ಹಲವು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಮುಗ್ಧ ಅಭಿನಯದ ಮೂಲಕವೇ ಅವರು ಹೆಚ್ಚು ಜನಪ್ರಿಯರಾಗಿದ್ದರು. ಅಮೂಲ್ಯ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2017ರಲ್ಲಿ ಜಗದೀಶ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಅವರು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚು ಬಿಜಿಯಾಗಿ, ಕ್ರಮೇಣ ಚಿತ್ರರಂಗದಿಂದ ದೂರವಾಗಿದ್ದರು. 2018ರಲ್ಲಿ ತೆರೆಕಂಡಿದ್ದ ದುನಿಯಾ ವಿಜಯ್ ನಟನೆಯ ‘ಮಾಸ್ತಿಗುಡಿ’ ಚಿತ್ರವೇ ಅಮೂಲ್ಯ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ. ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಈ ಚೆಂದದ ಚೆಲುವೆ ಅದೇ ವರ್ಚಸ್ಸು, ಉತ್ಸಾಹದ ಜತೆಯಲ್ಲಿ ಚಂದನವನಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ನಿರೀಕ್ಷೆ ಮೂಡಿಸಲು ಅಮೂಲ್ಯ ಸಿದ್ಧರಾಗುತ್ತಿದ್ದಾರೆ.

‘ಪೀಕಬೂ’ ವಿಶಿಷ್ಟ ಕಥೆ

‘ಪೀಕಬೂ’ ಚಿತ್ರಕ್ಕೆ ನಿರ್ದೇಶಕ ಮಂಜು ಸ್ವರಾಜ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಶ್ರಾವಣಿ ಸುಬ್ರಹ್ಮಣ್ಯ’ ಬಳಿಕ ಮಂಜು ಮತ್ತು ಅಮೂಲ್ಯ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರ ಹಾಗೂ ಅಮೂಲ್ಯ ರಿ-ಎಂಟ್ರಿ ಕುರಿತು, ‘ಅಮೂಲ್ಯ ಸ್ಟಾರ್‌ಡಮ್ ಇರುವಾಗಲೇ ಮದುವೆಯಾಗಿ ಚಿತ್ರರಂಗದಿಂದ ಸ್ವಲ್ಪ ದಿನಗಳ ಕಾಲ ದೂರವಾಗಿದ್ದರು. ಇದೀಗ ನಮ್ಮ ಸಿನಿಮಾದ ಮೂಲಕ ಅವರು ಮರಳುತ್ತಿದಾರೆಂದರೆ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಇಂದಿಗೂ ಅಮೂಲ್ಯ ಅದೇ ಸ್ಟಾರ್‌ಡಮ್ ಕಾಯ್ದುಕೊಂಡಿದ್ದಾರೆ. ಹಾಗಾಗಿ, ಅವರ ಕಮ್‌ಬ್ಯಾಕ್ ಬಗ್ಗೆ ತುಂಬಾ ಆಲೋಚಿಸಿ ಈ ಕಥೆ ಮಾಡಿದ್ದೇವೆ. ಒಂದೂವರೆ ವರ್ಷದ ಹಿಂದೆ ಒನ್‌ಲೈನ್ ಸ್ಟೋರಿ ಹೇಳಿದಾಗ ಅದು ನಟಿಗೆ ಹೆಚ್ಚು ಇಷ್ಟವಾಯಿತು. ಬಳಿಕ ಕಥೆ ಆರಂಭಿಸಿದ್ದೆವು. ‘ಪೀಕಬೂ’ ಎಂಬುದು ಗೀಬ್ರಿಷ್ ಭಾಷೆಯ ಪದ. ಇದಕ್ಕೆ ಇದೇ ಅಂತಾ ಅರ್ಥ ಇಲ್ಲ. ಮಕ್ಕಳನ್ನು ಖುಷಿಪಡಿಸುವುದಕ್ಕಾಗಿ ಈ ಪದವನ್ನು ಬಳಸುತ್ತಾರೆ. ಹಾಗಾಗಿ, ನಮ್ಮ ಕಥೆಗೆ ಇದೇ ಸೂಕ್ತ ಎಂದು ಟೈಟಲ್ ಮಾಡಿದೆವು. ಪ್ರತಿ ಮನೆಯಲ್ಲಿ ನಡೆಯುವ ಯೂನಿವರ್ಷಲ್ ಕಥೆ ಇದು. ಕುಟುಂಬದ ಅಂಶಗಳ ಜತೆಗೆ ಕಾಮಿಡಿಯೊಂದಿಗೆ ಸಾಗುತ್ತದೆ. ಅ.2ರಿಂದ ಶೂಟಿಂಗ್ ಆರಂಭವಾಗಲಿದ್ದು, 50 ದಿನಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಂಡಿದ್ದೇವೆ. ಮುಂದಿನ ವರ್ಷಕ್ಕೆ ಸಿನಿಮಾ ತೆರೆ ಮೇಲೆ ಬರಲಿದೆ’ ಎಂದು ಮಂಜು ಸ್ವರಾಜ್ ಮಾಹಿತಿ ನೀಡಿದರು.