ಸಿನಿವಾಣಿ

ಸಿನಿಮಾಮೃತಾ : ಕನ್ನಡ, ತಮಿಳು ಚಿತ್ರಗಳಲ್ಲಿ ಚಿತ್ರದುರ್ಗದ ಹುಡುಗಿಯ ಮಿಂಚು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅಮೃತಾ ರಾಜ್​, ಮೂಲತಃ ಚಿತ್ರದುರ್ಗದ ಹುಡುಗಿ. ಎಂಟನೇ ತರಗತಿಯಲ್ಲಿರುವಾಗಲೇ ಕಿರುಚಿತ್ರವೊಂದರಲ್ಲಿ ನಟಿಸಲು ಹೋಗಿ, ಸಿನಿಮಾಗೆ ಆಯ್ಕೆಯಾದವರು. ಹೀಗೆ "ಭರವಸೆ' ಎಂಬ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ ಬಳಿಕ ಈ ಹುಡುಗಿ ಮತ್ತೆ ಹಿಂದಿರುಗಿ ನೋಡಿಲ್ಲ. "ಲೇರಿಯಾ' ಮತ್ತು "ಗರಾಸಿ' ಎಂಬ ಲಂಬಾಣಿ ಸಿನಿಮಾಗಳಲ್ಲಿ ನಟಿಸಿದ ಅವರು ಕನ್ನಡದಲ್ಲೂ "ಧರ್ಮಪುರ', "ರುಧಿರ ಕಣಿವೆ', "ನವ ಇತಿಹಾಸ' ಚಿತ್ರಗಳಲ್ಲಿ ಮಿಂಚಿದ್ದಾರೆ. ""ಸಹಾರಾ' ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಮೆಡಿಕಲ್​ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. "ಶೇರ್​' ಎಂಬ ಚಿತ್ರದ ಶೂಟಿಂಗ್​ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅದರಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ ಅಮೃತಾ.

ಕಾಲಿವುಡ್​ನಲ್ಲಿ ಹ್ಯಾಟ್ರಿಕ್​ ಚಿತ್ರಗಳು
ಕನ್ನಡದ ಜತೆ ತಮಿಳಿನಲ್ಲೂ ಅಮೃತಾ ರಾಜ್​ ಬಿಜಿಯಾಗಿದ್ದಾರೆ. "ಲಾಕ್​ಡೌನ್​ಗೂ ಮುನ್ನ ತಮಿಳಿನಿಂದ ಕರೆ ಮಾಡಿ ಮೊದಲು "ವೀರ ಮಗಳ' ಎಂಬ ಚಿತ್ರದಲ್ಲಿ ಅವಕಾಶ ನೀಡಿದರು. ನಂತರ "ಕಲುವು ಚೂತಿರಾ' ಎಂಬ ಚಿತ್ರದಲ್ಲಿ ಪೊಲೀಸ್​ ಆಗಿ ಹಾಗೂ "ಆಪ್ತಬಾಂಧವನ್​' ಎಂಬ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ನಾಲ್ಕನೇ ಚಿತ್ರದ ಮಾತುಕತೆಯೂ ನಡೆಯುತ್ತಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ ಅವರು.

ಕ್ಯಾರಕ್ಟರ್​ ಪಾತ್ರಗಳು ಇಷ್ಟ
ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹೊಸತರಲ್ಲಿ ನಾಯಕಿಯಾಗಿಯೇ ನಟಿಸಬೇಕು ಅಂತಿದ್ದರಂತೆ ಅಮೃತಾ. "ಆದರೆ ಪಾತ್ರ ಚೆನ್ನಾಗಿದ್ದರೆ ಕ್ಯಾರಕ್ಟರ್​ ರೋಲ್​ಗಳ ಮೂಲಕವೂ ಗುರುತಿಸಿಕೊಳ್ಳಬಹುದು ಅಂತ ಮನವರಿಕೆ ಆಯಿತು. ಹೀಗಾಗಿಯೇ ಎಲ್ಲ ಪಾತ್ರಗಳನ್ನೂ ಸವಾಲಾಗಿಯೇ ಸ್ವೀಕರಿಸುತ್ತೇನೆ. ಸದ್ಯ ಐದು ಸಿನಿಮಾಗಳಿವೆ. ಇದುವರೆಗಿನ ಸಿನಿಮಾ ಪಯಣ ತುಂಬ ಚೆನ್ನಾಗಿದೆ. ನಿರೀಸಿದ ಪಾತ್ರಗಳು ದೊರೆಯುತ್ತಿವೆ. ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನಟನೆ ಅಂದರೇನು ಅಂತಲೇ ಗೊತ್ತಿರಲಿಲ್ಲ. ಈಗ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ' ಎಂದು ಖುಷಿಯಾಗುತ್ತಾರೆ ಅಮೃತಾ ರಾಜ್​.