ಸಿನಿವಾಣಿ

ಕತ್ರೀನಾ ನಂ.1: ಬಾಲಿವುಡ್ ನಟಿಯರ ಪೈಕಿ ಅಗ್ರಸ್ಥಾನ

ಕಳೆದ ವರ್ಷ ಬಾಲಿವುಡ್​ನ ನಂಬರ್ ಒನ್ ನಟಿ ಯಾರು? ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಮೂಡ್ ಆಫ್ ದಿ ನೇಶನ್ ಹೆಸರಿನ ಈ ಸಮೀಕ್ಷೆಯಲ್ಲಿ, ಕತ್ರೀನಾ ಕೈಫ್ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ ಎನ್ನುವುದು ವಿಶೇಷ. ನಂತರದ ಸ್ಥಾನಗಳಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಮತ್ತು ಕರೀನಾ ಕಪೂರ್ ಇದ್ದಾರೆ.

ಕತ್ರೀನಾ ಕೈಫ್ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಿಲ್ಲ. ಏಕೆಂದರೆ, ಕಳೆದ ವರ್ಷ ಕತ್ರೀನಾ ಅಭಿನಯದ ಒಂದು ಚಿತ್ರ ಮಾತ್ರ ಬಿಡುಗಡೆಯಾಗಿತ್ತು. ಅದೇ ‘ಸೂರ್ಯವಂಶಿ’. ಈ ಚಿತ್ರದಲ್ಲೂ ಅಕ್ಷಯ್ ಕುಮಾರ್ ಅಭಿನಯ ಮತ್ತು ಸಾಹಸ ದೃಶ್ಯಗಳು ಹೈಲೈಟ್ ಆಗಿದ್ದವು. ಹಾಗಿದ್ದರೂ, ಕತ್ರೀನಾ ಹೆಸರು ಮುನ್ನೆಲೆಗೆ ಬಂದಿದ್ದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ. ‘ಸೂರ್ಯವಂಶಿ’ ಬಿಟ್ಟರೆ, ಕತ್ರೀನಾ ಒಂದಿಷ್ಟು ಸುದ್ದಿ ಮಾಡಿದ್ದು ಮದುವೆ ವಿಷಯದಿಂದ.

ದೀಪಿಕಾ ಪಡುಕೋಣೆ ಪೂರ್ಣಪ್ರಮಾಣದಲ್ಲಿ ಅಭಿನಯಿಸಿರುವ ಒಂದೇ ಒಂದು ಚಿತ್ರ ಕಳೆದ ಎರಡು ವರ್ಷಗಳಿಂದ ಬಿಡುಗಡೆಯಾಗಿಲ್ಲ. ಆದರೂ ದೀಪಿಕಾ, ಈ ಪಟ್ಟಿಯಲ್ಲಿ ಎರಡನೇ ಸ್ಥಾರ ಗಳಿಸಿರುವುದು ಹಲವರ ಹುಬ್ಬೇರಿಸಿದೆ. ‘83’ ಚಿತ್ರದಲ್ಲೊಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ, ‘ಗೆಹ್ರಾಯಿಯಾನ್’ ಎಂಬ ಚಿತ್ರದಲ್ಲಿ ನಟಿಸಿದಾರೆ. ಮಿಕ್ಕಂತೆ ಪ್ರಿಯಾಂಕಾ ಚೋಪ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಈಗ ಅವರು ಬಾಲಿವುಡ್​ಗೆ ಮಾತ್ರ ಸೀಮಿತವಲ್ಲ. ಹಾಲಿವುಡ್​ನಲ್ಲೂ ಛಾಪು ಮೂಡಿಸಿರುವ ಪ್ರಿಯಾಂಕಾ, ‘ದಿ ಮ್ಯಾಟ್ರಿಕ್ಸ್ - ರಿಸರೆಕ್ಷನ್ಸ್’ ಚಿತ್ರದಲ್ಲೊಂದು ನಟಿಸಿ ಗಮನ ಸೆಳೆದಿದ್ದರು. ಕಂಗನಾ ಕಳೆದ ವರ್ಷ ಹೆಚ್ಚು ಸುದ್ದಿಯಲ್ಲಿದ್ದು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ. ಇನ್ನು, ಕರೀನಾ ಕಪೂರ್ ಅಭಿನಯದ ಯಾವೊಂದು ಚಿತ್ರ ಸಹ ಕಳೆದ ವರ್ಷ ಬಿಡುಗಡೆಯಾಗಿಲ್ಲ.