ಸಿನಿವಾಣಿ

ರೈತರ ಬಂಧನ ತಪ್ಪಿಸಲು ತಿದ್ದುಪಡಿ; ಸಾಗುವಳಿದಾರರಿಗೇ ಒತ್ತುವರಿ ಭೂಮಿ ಗುತ್ತಿಗೆ: ಸಚಿವ ಅಶೋಕ್ ಮಾಹಿತಿ

Webdesk - Ravikanth

ಬೆಂಗಳೂರು: ರಾಜ್ಯದ ಲಕ್ಷಾಂತರ ಸಣ್ಣ ರೈತರ ಪಾಲಿಗೆ ಕಂಟಕಪ್ರಾಯವಾಗಿ ‘ಬಂಧನ ಭೀತಿ’ ತಂದೊಡ್ಡಿರುವ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಕೊಂಚ ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕಾಫಿ, ಅಡಕೆ ಇತ್ಯಾದಿ ಬೆಳೆ ಬೆಳೆಯುತ್ತಿರುವ ರೈತರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬಯಸಿದೆ.

ಕಂದಾಯ ಇಲಾಖೆಯಿಂದ ಮುಂದಿನ ಕೆಲವು ವಾರ, ತಿಂಗಳಲ್ಲಿ ಒಂದಷ್ಟು ಮಹತ್ವಪೂರ್ಣ ತೀರ್ವನಗಳನ್ನು ಎದುರು ನೋಡಬಹುದಾಗಿದೆ. ಸೋಮವಾರ ವಿಜಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಈ ಸಂಗತಿಗಳನ್ನು ಪ್ರಸ್ತಾಪಿಸಿದರು. ಫೆಬ್ರವರಿ ಎರಡನೇ ವಾರದಲ್ಲಿ 56 ಲಕ್ಷ ರೈತರ ಮನೆ ಬಾಗಿಲಿಗೆ ನಾಲ್ಕು ಪ್ರಮುಖ ಭೂ ದಾಖಲೆಯನ್ನು ಉಚಿತವಾಗಿ ತಲುಪಿಸಲಾಗುತ್ತದೆ. ಕನಿಷ್ಠ ಅವಧಿಯಲ್ಲಿ ಅಫಿಡವಿಟ್ ಆಧಾರದಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಮಾಡುವ ಆದೇಶ ಸದ್ಯವೇ ಹೊರಬೀಳುವ ವಿಚಾರವನ್ನು ಸಚಿವರು ವಿವರಿಸಿದರು.

ಕಂದಾಯ ಇಲಾಖೆಯ ಸಮಸ್ಯೆ, ಸವಾಲು, ಹೊಸತನಗಳ ವಿಚಾರ ಕುರಿತ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದ ಸಚಿವರು, ತಮ್ಮ ಪ್ರಯತ್ನ, ದೂರದೃಷ್ಟಿ ಕ್ರಮಗಳು ಜನರ ಅನುಭವಕ್ಕೆ ಬರಲಿದೆ ಎಂಬುದನ್ನು ಒಂದೊಂದಾಗಿ ವಿವರಿಸಿದರು. ಭೂ ಕಬಳಿಕೆ ನಿಷೇಧ ಕಾಯ್ದೆಯಿಂದ ಸಣ್ಣ ರೈತರು ಜೈಲುಪಾಲಾಗುವುದನ್ನು ತಪ್ಪಿಸಲು ಕಾನೂನು ಸಡಿಲಿಕೆ ಮಾಡಲು ಈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ತರುವುದಾಗಿ ಪ್ರಕಟಿಸಿದರು. ಈ ಸಮಸ್ಯೆ ಸರ್ಕಾರದ ಅರಿವಿನಲ್ಲಿದೆ. ವಿಜಯವಾಣಿಯ ವೇದಿಕೆಯು ಮತ್ತೆ ನೆನಪಿಸಿದೆ. ಈ ಅಧಿವೇಶ ನದಲ್ಲೇ ತಿದ್ದುಪಡಿ ಮಸೂದೆ ಮಂಡಿಸಿ ಶಾಸನಸಭೆಯ ಒಪ್ಪಿಗೆ ಪಡೆಯಲಾಗುವುದೆಂದು ಅಶೋಕ್ ತಿಳಿಸಿದರು.

ಚಿಕ್ಕಮಗಳೂರು, ಕೊಡಗು, ಉಡುಪಿ ಸೇರಿ ಮಲೆನಾಡು ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿ ಒತ್ತುವರಿಯಾಗಿದ್ದು, ಕಾಫಿ, ಅಡಕೆ ಸೇರಿ ವಿವಿಧ ಬೆಳೆ ಬೆಳೆದಿದ್ದಾರೆ. ಈ ಒತ್ತುವರಿಯನ್ನು ಗುತ್ತಿಗೆ ಆಧಾರದಲ್ಲಿ ಆಯಾ ರೈತರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಹಲವಾರು ದಶಕಗಳಿಂದ ಒತ್ತುವರಿಯಾದರೂ ತೆರವು ಮಾಡಲು ಸಾಧ್ಯವಾಗಿಲ್ಲ. ಮುಂದೆಯೂ ಕಷ್ಟಸಾಧ್ಯ. ಹೀಗಾಗಿ ಒತ್ತುವರಿಯಾದ ಕೃಷಿ ಭೂಮಿಯನ್ನು ದರ ನಿಗದಿ ಮಾಡಿ ಕೆಲವು ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ, ಆಸ್ತಿಯೂ ಸರ್ಕಾರದ ಹೆಸರಲ್ಲೇ ಮುಂದುವರಿಯಲಿದೆ. ರೈತರಿಗೂ ಅನುಕೂಲ. ಸಣ್ಣ, ಅತಿ ಸಣ್ಣ ರೈತರನ್ನು ಹೊರತುಪಡಿಸಿ ಉಳಿದ ಒತ್ತುವರಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79ಎ ಮತ್ತು ಬಿ ರದ್ದು ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಸಚಿವ ಅಶೋಕ್, ಇದರ ಪರಿಣಾಮ ಕಾಣಿಸಲಾರಂಭವಾಗಿದೆ. ಈ ತೀರ್ವನದಿಂದ ಏನೋ ಆಗಿಹೋಗುತ್ತದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಆ ರೀತಿ ಆಗಿಲ್ಲ, ಆಗುವುದೂ ಇಲ್ಲ. ನಮ್ಮ ನಿರ್ಧಾರದಿಂದ ರೈತರ ಭೂಮಿ ಬೆಲೆ ಹೆಚ್ಚಾಗಿದೆ. ಇದರಿಂದ ರೈತರು ಅಷ್ಟು ಸುಲಭವಾಗಿ ಮಾರಾಟ ಮಾಡಲು ಮುಂದೆ ಬರುವುದಿಲ್ಲ. ಜತೆಗೆ ಗುತ್ತಿಗೆ, ಜಿಪಿಒ ಮಾಡಿಸಿಕೊಳ್ಳುವ ಪ್ರಕರಣ ಕಡಿಮೆಯಾಗಿ ನೇರ ನೋಂದಣಿಯಾಗುತ್ತಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ ಎಂದರು.

ಕೈಗಾರಿಕೆ, ವಸತಿ ಉದ್ದೇಶದ ಉತ್ತೇಜನಕ್ಕೆ ನಾವು 79ಎ, ಬಿ ರದ್ದುಪಡಿಸಿದೆವು, ಇದರ ಹೊರತು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ, ಇದೀಗ ಹೂಡಿಕೆ ಹೆಚ್ಚುತ್ತಿದೆ, ರೈತರಿಗೆ ಕೃಷಿಯ ಹೊಸ ಜ್ಞಾನ, ತಂತ್ರಜ್ಞಾನ ತಲುಪಿಸಲು ನೆರವಾಗುತ್ತಿದೆ. ಕೃಷಿಗೆ ಹೊಸಬರು ಬರಲು ಅನುಕೂಲವಾಗಲಿದೆ ಎಂದು ಹೇಳಿದರು.

ಮನೆ ಬಾಗಿಲಿಗೆ ದಾಖಲೆ: ರೈತರು ಭೂ ದಾಖಲೆಗಾಗಿ ಅಲೆದಾಟ, ಸುತ್ತಾಟ ತಪ್ಪಿಸಲು ನಾಲ್ಕು ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಕಾರ್ಯಕ್ರಮದಿಂದ ಅನುಕೂಲವಾಗಲಿದೆ ಎಂದು ಅಶೋಕ್ ತಿಳಿಸಿದರು. ತಮ್ಮ ಆಸ್ತಿ ಬಗ್ಗೆ ಜಾಗೃತಿ ಇರಲಿದೆ, ಬೋಗಸ್ ಆಗುವುದನ್ನು ತಡೆಯಬಹುದು, ಶುಲ್ಕವಿಲ್ಲದೇ ದಾಖಲೆ ಕೈಸೇರಲಿದೆ, ದಾಖಲೆಯಲ್ಲಿ ತಪ್ಪಾಗಿದ್ದರೆ ಅಥವಾ ಅಪ್​ಡೇಟ್ ಅಗತ್ಯವಿದ್ದರೆ ಅವರ ಗಮನಕ್ಕೆ ಬರಲಿದೆ ಎಂದು ಸಚಿವರು ಹೊಸ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.

ಪ್ರಮುಖ ನಿರ್ಣಯಗಳು

  • ಮುಂದಿನ 10-15 ವರ್ಷದಲ್ಲಿ ಸರ್ಕಾರಿ ಭೂಮಿ ಸಿಗುವುದು ಕಷ್ಟವಾಗಬಹುದು. ಹೀಗಾಗಿ ಕೂಡಲೇ ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ, ಸರ್ಕಾರಿ ಕಚೇರಿಗೆ ಜಾಗ ಮೀಸಲಿಟ್ಟುಕೊಳ್ಳಿ ಎಂದು ಎಲ್ಲ ಶಾಸಕರಿಗೆ ಪತ್ರ ಬರೆದಿದ್ದು, ತಾವು ಕಂದಾಯ ಸಚಿವರಾದ ಬಳಿಕ 1 ಸಾವಿರ ಸಂಖ್ಯೆಯಲ್ಲಿ ಕಡತ ಬಂದಿದ್ದು, ಅನುಮತಿ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
  • ಫೆಬ್ರವರಿ 14ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ರಾಜ್ಯದ 56 ಲಕ್ಷ ರೈತರಿಗೆ ಅವರ ಮನೆ ಬಾಗಿಲಿಗೆ 4 ಪ್ರಮುಖ ದಾಖಲೆಯನ್ನು ತಲುಪಿಸಲಾಗುತ್ತಿದೆ. ತಾವು ಹಾಗೂ ಮುಖ್ಯಮಂತ್ರಿಗಳು ಒಂದು ಹಳ್ಳಿಗೆ ಹೋಗಿ ಸಾಂಕೇತಿಕವಾಗಿ ವಿತರಿಸುತ್ತೇವೆಂದು ಕಂದಾಯ ಸಚಿವರು ಹೇಳಿದರು. ರಾಜ್ಯಾದ್ಯಂತ ಏಕಕಾಲಕ್ಕೆ ಅಂದು ವಿತರಣೆ ನಡೆಯಲಿದೆ.
  • ಅಕ್ರಮ- ಸಕ್ರಮ ವಿಚಾರ ಬಗೆಹರಿಯುವ ಲಕ್ಷಣ ಇದೆ. ಸುಪ್ರಿಂಕೋರ್ಟ್​ನಲ್ಲಿ ಅಫಿಡವಿಟ್ ಹಾಕಲಾಗುತ್ತಿದೆ. ಶೀಘ್ರವೇ ಶುಭ ಸುದ್ದಿ ನಿರೀಕ್ಷಿಸಬಹುದು ಮತ್ತು 6 ಲಕ್ಷ ಹೆಕ್ಟೇರ್ ಡೀಮ್್ಡ ಅರಣ್ಯವನ್ನು ಕಂದಾಯ ಇಲಾಖೆಗೆ ಪಡೆಯಲು ಒಪ್ಪಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಶೀಘ್ರವೇ ಅರಣ್ಯ ಇಲಾಖೆ ಅಫಿಡವಿಟ್ ಹಾಕಲಿದೆ. ಇದರಿಂದ ಲಕ್ಷಾಂತರ ಸಾಗುವಳಿದಾರರಿಗೆ ಅನುಕೂಲವಾಗಲಿದೆ ಎಂದರು.
  • ರಾಜ್ಯದಲ್ಲಿ ಕೃಷಿ ಮಾಡದ ಬೀಳುಭೂಮಿ ಸದ್ಬಳಕೆ ಮಾಡಿ ಕೊಳ್ಳಲು ಉದ್ದೇಶಿಸಲಾಗಿದೆ. ವಿವಿಧ ಕಾರಣದಿಂದ ಒಟ್ಟಾರೆ 15 ಲಕ್ಷ ಹೆಕ್ಟೇರ್ ಜಮೀನು ಪಾಳುಬಿದ್ದಿದೆ. ದಾಖಲೆಯಲ್ಲೂ ಬೀಳುಭೂಮಿ ಎಂದು ನಮೂದಾಗಿರುತ್ತದೆ. ಇದನ್ನು ಬಳಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.