ಸಿನಿವಾಣಿ

ಖಾಸಗಿ ಫೋಟೋಗಳು ಲೀಕ್​: ಮಾಜಿ ಬಾಯ್​ಫ್ರೆಂಡ್​ ವಿರುದ್ಧ ನಟಿ ಅಮಲಾ ಪೌಲ್​ ಗರಂ!

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಟ್ಟ ಮಾಜಿ ಬಾಯ್​ಫ್ರೆಂಡ್​ ಭವ್ನಿಂದರ್​ ಸಿಂಗ್​ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿರುವ ನಟಿ ಅಮಲಾ ಪೌಲ್​, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್​ ಸಹ ಮಾನಹಾನಿ ಪ್ರಕರಣ ದಾಖಲಿಸಲು ಅಮಲಾರಿಗೆ ಅನುಮತಿ ನೀಡಿದೆ.

ಫೋಟೋಗಳನ್ನು ಹರಿಬಿಟ್ಟಿರುವ ಮುಂಬೈ ಮೂಲದ ಗಾಯಕ ಭವ್ನಿಂದರ್​ ಸಿಂಗ್​ ಇದೇ ವರ್ಷದ ಮಾರ್ಚ್​ ತಿಂಗಳಲ್ಲಿ ಅಮಲಾರೊಂದಿಗೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಮದುವೆ ವಿಚಾರವನ್ನು ಅಮಲಾ ಅಲ್ಲಗೆಳೆದಿದ್ದಾರೆ.

ಫೋಟೋಗಳನ್ನು ಹರಿಬಿಟ್ಟು ಹೆಸರಿಗೆ ಕಳಂಕ ತರುವ ಆರೋಪ ಹಿನ್ನೆಲೆಯಲ್ಲಿ ಭವ್ನಿಂದರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮದ್ರಾಸ್​ ಹೈಕೋರ್ಟ್​ ಮಂಗಳವಾರ (ನ. 03) ಅಮಲಾರಿಗೆ ಅನುಮತಿ ನೀಡಿದೆ. ಭವ್ನಿಂದರ್​ ಮತ್ತು ಅಮಲಾ 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಈ ಬಗ್ಗೆ ಅಮಲಾ ಸ್ಪಷ್ಟನೆ ನೀಡಿದ್ದು, ಫೋಟೋಗಳನ್ನು ವೃತ್ತಿಪರ ಉದ್ದೇಶಕ್ಕಾಗಿ ತೆಗೆದುಕೊಳ್ಳಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ತನ್ನ ಫೋಟೋಗಳನ್ನು ಪ್ರಕಟಿಸುವುದಕ್ಕೆ ಭವ್ನಿಂದರ್​ಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಮಾರ್ಚ್​ನಲ್ಲಿ ಅಮಲಾರೊಂದಿಗಿನ ಫೋಟೋವನ್ನು ಭವ್ನಿಂದರ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ತಕ್ಷಣವೇ ವೈರಲ್​ ಆಗಿವೆ. ಇದಾದ ಬೆನ್ನಲ್ಲೇ ಫೋಟೋಗಳನ್ನು ಭವ್ನಿಂದರ್​ ಡಿಲೀಟ್​ ಮಾಡಿದ್ದರು. ಮದುವೆ ಬಗ್ಗೆಯೂ ಯಾವುದೇ ಖಚಿತ ಮಾಹಿತಿ ನೀಡಿರಲಿಲ್ಲ. ಮದುವೆ ವದಂತಿ ಸುಳ್ಳೆಂದು ಸ್ವತಃ ಅಮಲಾ ತೆಲುಗು ಟಿವಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. ಸಂದರ್ಶನದ ಪೂರ್ಣ ಮಾಹಿತಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್ಕಿಸಿ. ಡೇಟಿಂಗ್​ ಬಗ್ಗೆ ಗುಟ್ಟು ಬಿಚ್ಚಿಟ್ಟ ಅಮಲಾ ಪೌಲ್: 2ನೇ ಮದುವೆಗೆ ಹೆಬ್ಬುಲಿ ಬೆಡಗಿ ತಯಾರಿ ​

ಆದೈ ಚಿತ್ರಕ್ಕೂ ಮುನ್ನ ಮದುವೆ ಹಾಗೂ ಡಿವೋರ್ಸ್​ ವಿಚಾರದಲ್ಲಿ ಹೆಚ್ಚು ಸುದ್ದಿ ಮಾಡಿದ್ದರು. ಇನ್ನು ಕನ್ನಡಿಗರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಟನೆ ಹೆಬ್ಬುಲಿ ಚಿತ್ರದ ಮೂಲಕ ಅಮಲಾ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)